ಮತ್ಸ್ಯ ಲೋಕಕ್ಕೆ ಚಾಲನೆ ನೀಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
1 min readಮೈಸೂರು,ಅ.8- ಬಗೆ ಬಗೆಯ ಮತ್ಸ್ಯಗಳು… ಒಮ್ಮೆ ನಾವು ಯಾವುದೋ ಮತ್ಸ್ಯ ಲೋಕದಲ್ಲಿದ್ದೇವೆ ಎಂದು ಭಾಸವಾಗುತ್ತದೆ.
ಹೌದು, ಮೈಸೂರಿನ ಮೃಗಾಲಯದ ಸಮೀಪ ಲೋಕರಂಜನ್ ಆಕ್ವಾ ವರ್ಲ್ಡ್ ವತಿಯಿಂದ ನಿರ್ಮಾಣವಾಗಿರುವ ಅಂಡರ್ ವಾಟರ್ ಸಫಾರಿಗೊಮ್ಮೆ ಭೇಟಿ ನೀಡಿದರೆ ಮತ್ಸ್ಯ ಲೋಕದಲ್ಲಿ ವಿಹರಿಸುತ್ತಿದ್ದೇವೆ ಎಂದೆನ್ನಿಸುತ್ತದೆ.
ಈ ಮತ್ಸ್ಯ ಲೋಕಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ನಂತರ ಒಳಗೆ ಒಂದು ಸುತ್ತು ಓಡಾಡಿ ಮತ್ಸ್ಯಲೋಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
4.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇದು ರಾಜ್ಯದ ಮೊದಲ ಬೃಹತ್ ಮತ್ಸ್ಯ ಕೇಂದ್ರ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಿಟ್ಟರೆ ಕರ್ನಾಟಕದಲ್ಲಿ ಮೈಸೂರಿನಲ್ಲಿ ಮಾತ್ರ ಈ ರೀತಿಯ ಮತ್ಸ್ಯ ಲೋಕ ಇರುವುದು ಮತ್ತೊಂದು ವಿಶೇಷ.
ಸುಮಾರು 80 ಬಗೆಯ ವಿವಿಧ ಮೀನುಗಳ ಪ್ರಬೇಧಗಳನ್ನು ಇಲ್ಲಿ ಕಾಣಬಹುದು. ವಿವಿಧ ದೇಶ ಹಾಗೂ ರಾಜ್ಯಗಳ ಬೃಹತ್ ಮತ್ಸ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಅಕ್ವೇರಿಯಂ ವೀಕ್ಷಣೆಗೆ ವಯಸ್ಕರಿಗೆ 99 ರೂ. ಮಕ್ಕಳಿಗೆ 69 ರೂ. ದರ ನಿಗದಿಪಡಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸಾರ್ವಜನಿಕರು ಭೇಟಿ ನೀಡಬಹುದು.