ಯಡಿಯೂರಪ್ಪ ಆಪ್ತರ ಮೇಲಿನ ಐಟಿ ದಾಳಿಯಲ್ಲಿ ರಾಜಕೀಯ ಉದ್ದೇಶ: ಇದಕ್ಕೆ ಸಿದ್ದರಾಮಯ್ಯ ಕಾರಣ; ಎಚ್.ಡಿ.ಕುಮಾರಸ್ವಾಮಿ
1 min readಮೈಸೂರು,ಅ.12-ಯಡಿಯೂರಪ್ಪ ಆಪ್ತರ ಮೇಲಿನ ಐಟಿ ದಾಳಿಯಲ್ಲಿ ರಾಜಕೀಯ ಉದ್ದೇಶ ಇದೆ. ಐಟಿ ದಾಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಮೈಸೂರಿಗೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ದಂಪತಿ ಸಮೇತ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇ ಐಟಿ ರೇಡ್ ಗೆ ಕಾರಣ. ಸಿದ್ದರಾಮಯ್ಯ ಪವರ್ ಗಾಗಿ ಏನು ಬೇಕಾದರೂ ಮಾಡುತ್ತಾರೆ. ಯಡಿಯೂರಪ್ಪ ಭೇಟಿ ಸಹ ಅದರ ಭಾಗವಾಗಿದೆ. ಹೇಗಾದರೂ ಸರಿ ಸಿದ್ದರಾಮಯ್ಯನವರಿಗೆ ಅಧಿಕಾರಬೇಕು. ಈ ಭೇಟಿ ಬಗ್ಗೆ ಕೇಂದ್ರಕ್ಕೂ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಐಟಿ ದಾಳಿ ನಡೆಸಿದೆ. ಐಟಿ ದಾಳಿ ಹಿಂದೆ ಸ್ಪಷ್ಟವಾಗಿ ರಾಜಕೀಯ ಉದ್ದೇಶ ಇದೆ. ಇದರ ಬಗ್ಗೆ ಅನುಮಾನ ಇಲ್ಲ ಎಂದರು.
ಪುಟ್ಗೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಸರ್ಕಾರ ತೆಗೆದ ಮಹಾನ್ ನಾಯಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ನೀವು ನನ್ನ ಬಗ್ಗೆ ಮಾತನಾಡಬೇಡಿ. ಗೂಟದ ಕಾರಿಗಾಗಿ ನಿಮ್ಮ ಪಕ್ಷದ 23 ಜನ ನಿಮ್ಮ ಪಕ್ಷದ ಸಚಿವರನ್ನು ಬೀದಿಗೆ ತಂದವರು ನೀವು. ಯಡಿಯೂರಪ್ಪ ಸರ್ಕಾರ ಬರಲು ನಿಮ್ಮ ಪಾತ್ರ ಎಷ್ಟು ಅನ್ನೋದು ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ನೀವು ಎಷ್ಟೆಟ್ಟು ಕುತಂತ್ರ ಮಾಡುತ್ತೀರಾ ಅನ್ನೋದು ನನಗೆ ಗೊತ್ತಿದೆ ಎಂದು ಹರಿಹಾಯ್ದರು.
ಸಿಂಧಗಿ ಉಪಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅಲ್ಲಿ ಕಾಂಗ್ರೆಸ್ ಪಕ್ಷ ಲೆಕ್ಕಕ್ಕೆ ಇಲ್ಲ. ಅಲ್ಲಿ ಕಾಂಗ್ರೆಸ್ ಯಾವಾಗಲೂ ಮೂರನೇ ಸ್ಥಾನದಲ್ಲಿದೆ. ಅಲ್ಲೇನಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಇದೆ. ನಾವು ಯೋಚನೆ ಮಾಡಿ ಅಭ್ಯರ್ಥಿ ಹಾಕಿದ್ದೇವೆ. ಸಿದ್ದರಾಮಯ್ಯಗೆ ಪಾಠ ಕಲಿಸಲು ಈ ಅಭ್ಯರ್ಥಿ ಹಾಕಿದ್ದೇವೆ. ಸಿದ್ದರಾಮಯ್ಯ ಯಾವ ದೊಣ್ಣೆನಾಯಕ ಅಂತ ಅವರು ಹೇಳಿದ ಅಭ್ಯರ್ಥಿ ಹಾಕಬೇಕು. ಎರಡು ಕ್ಷೇತ್ರದಲ್ಲಿ ಜೆಡಿಎಸ್ ಗಂಭೀರವಾಗಿ ಸ್ಪರ್ಧೆ ಮಾಡಲಿದೆ ಎಂದರು.