ಭಕ್ತಿಯನ್ನು ಯಾರೂ ಕೂಡಾ ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ- ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿನ
1 min readಮೈಸೂರು – ಭಕ್ತಿಯನ್ನು ಯಾರೂ ಕೂಡಾ ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ, ಅದನ್ನು ಸತತ ಶ್ರಮದಿಂದ ಪಡೆಯಬೇಕು ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ಜನ್ಮ ದಿನೋತ್ಸವದ ಇಂದಿನ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಗೌರವ ಸಲ್ಲಿಸಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಭಕ್ತಿಗೆ ಅಪಾರ ಮಹತ್ವ ಇದೆ.ಅದು ಇಲ್ಲದಿದ್ದರೆ ಬೆಲೆಯೇ ಇರುವುದಿಲ್ಲ, ಭಕ್ತಿ ಎಂಬುದು ಮನದ ಒಳಗಿಂದ ಹುಟ್ಟಿಬರಬೇಕು,ಇಂತಹ ಪರಮ ಭಕ್ತಿಯನ್ನು ಶಕ್ತಿಯ ರಸ ತುಂಬಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತಮ್ಮ ಭಕ್ತರಿಗೆ ನೀಡಿದ್ದಾರೆ ಎಂದು ಬಣ್ಣಿಸಿದರು. ಸ್ವಾಮೀಜಿಯವರು ಖಾವಿ ಧರಿಸಿದ್ದಾರೆ ಆದರೆ ಅವರ ಕುಟುಂಬ ದೊಡ್ಡದು. ಅವರು ಸಮಾಜದ ಎಲ್ಲರ ಯೋಗಕ್ಷೇಮವನ್ನು ಆಧ್ಯಾತ್ಮಿಕ ಹಾಗೂ ಭೌತಿಕವಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಗಣಪತಿ ಶ್ರೀಗಳು ತಮ್ಮ ಸಂಗೀತದ ಗಾನದಿಂದ ಅದೆಷ್ಟೋ ರೋಗಗಳನ್ನು ಗುಣಪಡಿಸಬಲ್ಲರು,ಅವರ ಗಾನದ ಶಕ್ತಿ ಯೊಂದಿಗೆ ಭಕ್ತಿಯ ಶಕ್ತಯೂ ಸೇರಿದೆ.ಅವರಲ್ಲಿ ಸಿಂಹ ದಂತಹ ತೇಜಸ್ಸು ತುಂಬಿದೆ ಎಂದು ನುಡಿದರು. ಶ್ರೀ ಗಳಿಗೆ ಭಗವಂತ ಪರಿಪೂರ್ಣ ಆಯಸ್ಸು,ಆರೋಗ್ಯ ಕರುಣಿಸಲಿ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾರೈಸಿದರು. ನಂತರ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಮಾತನಾಡಿ ಮನುಷ್ಯರಿಗೆ ಭಗವಂತ ಅಸಾಧಾರಣ ಬದುಕು ಕೊಟ್ಟಿದ್ದಾನೆ,ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಾಣಿ-ಪಕ್ಷಿಗಳ ಬದುಕು ಕೂಡಾ ಒಳ್ಳೆಯದು ಅವು ಯಾರಿಗೂ ಹಿಂಸೆ ಮಾಡದೆ ಬದುಕುತ್ತವೆ, ನಾವು ಅವುಗಳ ಹಾಗೆ ಇರಲು ಸಾಧ್ಯವಿಲ್ಲ, ಆದರೆ ಅರ್ಥ ಪೂರ್ಣವಾಗಿ ಬದುಕಿದರೆ ಸಾರ್ಥಕ ಎಂದು ನುಡಿದರು.
ಭಗವಂತನು ಶ್ರೀ ಗಣಪತಿ ಸ್ವಾಮೀಜಿಯವರಿಂದ ವಿಶಿಷ್ಟ ಕೆಲಸ ಮಾಡಿಸುತ್ತಿದ್ದಾನೆ,ಅವರಿಗೆ ಆಂಜನೇಯನ ಅನುಗ್ರಹವಿದೆ. ಹನುಮಂತನೇ ಪ್ರಾಣವಾಯು,ಹಾಗಾಗಿ ಶ್ರೀ ಗಳು ಸಾವಿರಾರು ಮಂದಿಯ ಉಸಿರಾಗಿದ್ದಾರೆ ಎಂದು ತಿಳಿಸಿದರು.
ಸ್ವಾಮೀಜಿಯವರ ದರ್ಶನ ಮಾಡಿದರೆ ಸಹಸ್ರ ಚಂದ್ರನ ದರ್ಶನ ಮಾಡಿದಂತಹ ತೃಪ್ತಿ ಸಿಗುತ್ತದೆ,ಅವರು ಭಕ್ತರಿಗಾಗಿ ಅಪೂರ್ವ ಕೆಲಸ ಮಾಡಿದ್ದಾರೆ ಎಂದು ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ನುಡಿದರು. ನಂತರ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು,ನಮ್ಮ ಜೀವನ ಶೈಲಿ ಯಲ್ಲಿ ಶಿಸ್ತು ಇರಬೇಕು,ನಮ್ಮ ಸಮಯ ಹಾಳು ಮಾಡದೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬೇಡದ ವಿಷಯಗಳನ್ನು ಚಿಂತಿಸದೆ ನಮ್ಮ ಜೀವನದ ಪ್ರತಿ ನಿಮಿಷವನ್ನೂ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಾವು ಬಾಡಿಗೆ ಮನೆಯಲ್ಲಿ ಇರುವವರು ಸಮಯ ಬಂದಾಗ ಇದನ್ನು ಬಿಟ್ಟು ಹೋಗಲೇಬೇಕು. ನಮ್ಮ ಮನೆ ಇಲ್ಲಿ ಇಲ್ಲ, ಅಲ್ಲಿದೆ ಮನೆ. ಅದೇ ವೈಕುಂಠ ಎಂದು ಬಣ್ಣಿಸಿದರು. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ನಿಜವಾದ ದೀಪವನ್ನು ಬೆಳಗಬೇಕು ಎಂದು ನುಡಿದ ಶ್ರೀಗಳು ಪ್ರತಿ ದಿನ ದೀಪ ಹಚ್ಚುವುದಾಗಿ ಭಕ್ತರಿಂದ ಪ್ರತಿಜ್ಞೆ ಮಾಡಿಸಿದುದು ವಿಶೇಷವಾಗಿತ್ತು. ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80 ನೇ ಜನ್ಮದಿನೋತ್ಸವ ಪ್ರಯುಕ್ತ ಇಂದು ನಡೆದ ಚೈತನ್ಯಾರ್ಚನೆ ಕಾರ್ಯಕ್ರಮದಲ್ಲಿ
28ನೆ ವೇದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ವಾಂಸರು ಗಳಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಪ್ರಮಾಣಪತ್ರವನ್ನು ವಿತರಿಸಿದರು. ಇದೇ ವೇಳೆ ವಿವಿಧ ಕ್ಷೇತ್ರ ಗಳಲ್ಲಿನ ಗಣ್ಯರಿಗೆ ಸನ್ಮಾನ ಮಾಡಲಾಯಿತು. ದತ್ತ ಅವಧೂತ ಪೀಠದ ನಾದನಿಧಿ ಪ್ರಶಸ್ತಿಯನ್ನು ಬೆಂಗಳೂರಿನ ಮೃದಂಗ ವಿದ್ವಾನ್ ಎ.ವಿ.ಆನಂದ್ ಹಾಗೂ ಕರ್ನಾಟಕ ಸಂಗೀತ ವಿದ್ವಾನ್ ವಿಜಯವಾಡದ ಮಲ್ಲಾದಿ ಸೂರಿಬಾಬು ಅವರಿಗೆ ನೀಡಿ ಗೌರವಿಸಲಾಯಿತು. ಆಸ್ಥಾನ ವಿದ್ವಾನ್ ಪ್ರಶಸ್ತಿಯನ್ನು ಕಂಜೀರ ವಿದ್ವಾನ್ ಬೆಂಗಳೂರಿನ ಎನ್. ಅಮೃತ್, ವ್ಯಾಕರಣ ಮತ್ತು ಸ್ಮಾರ್ತ ಪರಿಣಿತರಾದ ತಿರುಪತಿಯ ಗಂಡಿಕೋಟ ಫಣಿರಾಜ ಶಾಸ್ತ್ರಿ ಅವರುಗಳಿಗೆ ನೀಡಿ ಗೌರವಿಸಲಾಯಿತು. ಇದೇ ವೇಳೆ ಪ್ರಾಣಿಬಂಧು ಪ್ರಶಸ್ತಿಯನ್ನು ಮೈಸೂರಿನ ಡಾ. ಶಶಿಭೂಷಣ್ ಅವರಿಗೆ ನೀಡಿ ಸನ್ಮಾನಿಸಲಾಯಿತು.