ದಸರಾ: ಗಜಪಡೆಗೆ ತಾಲೀಮು ಹಿನ್ನೆಲೆ; ಕುಶಾಲತೋಪುಗಳಿಗೆ ಪೂಜೆ ಸಲ್ಲಿಕೆ
1 min readಮೈಸೂರು,ಸೆ.20-ನಾಡಹಬ್ಬ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಕುಶಾಲತೋಪು ಸಿಡಿಸಿ ತಾಲೀಮು ನೀಡಲಾಗುವುದು. ಅದಕ್ಕಾಗಿ ಇಂದು ಅರಮನೆ ಆವರಣದಲ್ಲಿ ಕುಶಾಲತೋಪುಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು, ನಾಡಹಬ್ಬ ದಸರಾ ಆಚರಣೆಗೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಪ್ರಮುಖವಾದ ಅಂಶ ಕುಶಾಲತೋಪು ಸಿಡಿಸುವಂತಾಗಿದ್ದು, ಪ್ರತಿವರ್ಷ ಅರಮನೆಯ ಆವರಣದಲ್ಲಿ ಪ್ರಾಕ್ಟೀಸ್ ಹಾಗೂ ರಿಹರ್ಸಲ್ ಮಾಡುತ್ತೇವೆ. ಅದರಂತೆ ಇಂದು ಕುಶಾಲತೋಪು ಸಜ್ಜುಗೊಳಿಸಿ, ವಿಶೇಷ ಪೂಜೆ ಸಲ್ಲಿಸಿ ಅವುಗಳನ್ನು ಪ್ರಾಕ್ಟೀಸ್ ಮಾಡಲು ತೆಗೆದುಕೊಂಡು ಹೋಗಲಾಗುವುದು ಎಂದರು
ಇಂದಿನಿಂದ 15 ದಿನಗಳ ಕಾಲ ಪ್ರಾಕ್ಟೀಸ್ ಮಾಡುತ್ತೇವೆ. ನಮ್ಮ ನುರಿತ 3೦ ಮಂದಿಯ ಸಿಆರ್ ತಂಡ ಪ್ರಾಕ್ಟೀಸ್ ಮಾಡಿಸಲಿದೆ. ಗಜಪಡೆ ಶಬ್ದಕ್ಕೆ ಹೊಂದಿಕೊಳ್ಳಬೇಕಾಗಿರುವುದರಿಂದ ಪ್ರಾಕ್ಟೀಸ್ ಪ್ರತಿನಿತ್ಯ ನಡೆಯುತ್ತದೆ. ಕುಶಲಾತೋಪು ರಿಹರ್ಸಲ್ ಮೂರು ಬಾರಿ ನಡೆಯಲಿದ್ದು, 21 ಬಾರಿ ಸೆಲ್ಯೂಟ್ ಮಾಡಲಾಗುತ್ತದೆ ಎಂದು ಹೇಳಿದರು.
ಪುರೋಹಿತರಾದ ಪ್ರಹ್ಲಾದ ರಾವ್ ಮಾತನಾಡಿ, ಅರಮನೆಯಲ್ಲಿರುವ ಕುಶಾಲತೋಪುಗಳಿಗೆ ಪೂಜೆ ಸಲ್ಲಿಸಲಾಗಿದೆ. ನಾವು ಯಾವುದೇ ಯುದ್ಧಗಳಿಗೆ ಹೋಗಬೇಕಾದರೆ, ಕಾರ್ಯದಲ್ಲಿ ವಿಜಯ ಆಗಬೇಕೆಂದರೆ ವಿಜಯಗಣಪತಿಗೆ ಪೂಜೆ ಸಲ್ಲಿಸುತ್ತೇವೆ. ಆದ್ದರಿಂದ ಇಂದು ವಿಜಯಗಣಪತಿ, ಶ್ರೀ ದುರ್ಗಿ ಹೆಸರಿನಲ್ಲಿ, ಚಾಮುಂಡೇಶ್ವರಿ ಹೆಸರಿನಲ್ಲಿ ಪೂಜೆ ಮಾಡಿ, ಮೃತ್ಯುಂಜಯ ಹೆಸರಿನಲ್ಲಿ ಮಹಾಪೂಜೆ ಸಲ್ಲಿಸಿದ್ದೇವೆ. ಎಲ್ಲಾ ಕುಶಾಲತೋಪುಗಳಿಗೆ ಪೂಜೆ ಮಾಡಿದ್ದೇವೆ. ಎಲ್ಲರ ಬಳಿಯಲ್ಲೂ ಮೃತ್ಯುಂಜಯ ಜಪ ಮಾಡಿಸಿದ್ದೇವೆ ಎಂದರು.