ದಸರಾ ಹಿನ್ನೆಲೆ: ಕುಶಾಲತೋಪು ಸಿಡಿಸುವ ತಾಲೀಮು
1 min readಮೈಸೂರು,ಸೆ.30-ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಅದರಂತೆ ಇಂದು ಫಿರಂಗಿ ಗಾಡಿಗಳಿಂದ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಿತು.
ಗಜಪಡೆ ಹಾಗೂ ಅಶ್ವಗಳು ಬೆದರದಂತೆ ಫಿರಂಗಿಗಳ ಮೂಲಕ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಸಲಾಯಿತು.
ಅರಮನೆ ಹೊರ ಆವರಣದಲ್ಲಿರುವ ಕೋಟೆ ಮಾರಮ್ಮನವರ ದೇಗುಲದ బಳಿ ಡಿಸಿಎಫ್ ಕರಿಕಾಳನ್, ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ತಾಲೀಮು ನಡೆಯಿತು.
ಕುಶಾಲ ತೋಪಿನ ಶಬ್ಧಕ್ಕೆ ಕೆಲ ಆನೆಗಳು, ಅಶ್ವಗಳು ವಿಚಲಿತಗೊಂಡಿವೆ. ಅಶ್ವತ್ಥಾಮ ಹಾಗೂ ಲಕ್ಷ್ಮಿ ಆನೆಗಳು ಬೆಚ್ಚಿದ ಘಟನೆ ನಡೆಯಿತು. ಜಂಬೂ ಸವಾರಿ ಮೆರವಣಿಗೆಗೆ ಮುನ್ನ ಒಟ್ಟು ಮೂರು ಬಾರಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮನ್ನು ಸಿಎಆರ್ ಸಿಬ್ಬಂದಿಗಳು ನಡೆಸುತ್ತಾರೆ.
ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ ರಾಷ್ಟ್ರಗೀತೆ ನುಡಿಸುವ ವೇಳೆ 21 ಬಾರಿ ಕುಶಾಲತೋಪುಗಳನ್ನು
ಸಿಡಿಸಿ ಗೌರವ ಸಲ್ಲಿಸಲು ಪೂರ್ವ ಸಿದ್ಧತೆ ನಡೆಯುತ್ತಿದೆ.
ಇದು ಅತ್ಯಂತ ಕಠಿಣ ಹಾಗೂ ಸವಾಲಿನ ಸಮಯವಾಗಿದ್ದು, ಬ್ಯಾರೆಲ್ ಒಳಗೆ ಒಂದು ಸಣ್ಣ ಕಿಡಿ ಉಳಿದುಕೊಂಡರೂ ಗನ್ ಪೌಡರ್ ಹಾಕಿದ ತಕ್ಷಣವೇ ಸ್ಫೋಟಗೊಳ್ಳುವ ಸಂಭವವಿರುವುದರಿಂದ ಭಾಗವಹಿಸುವ ಎಲ್ಲ ಸಿಬ್ಬಂದಿಗೂ ನಗರ ಸಶಸ್ತ್ರ ಮೀಸಲು ದಳ ವಿಶೇಷ ವಿಮೆ ಮಾಡಿಸಿದೆ. ಗನ್ ಪೌಡರ್ ಸಿಡಿದ ನಂತರ ಬ್ಯಾರೆಲ್ ಗೆ ಸಿಂಬವನ್ನು ತೂರಿಸಿ
ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಸ್ವಚ್ಛಗೊಳಿಸುವುದು ಹಾಗೂ ಮದ್ದು ತುಂಬಿದ ಚೀಲವನ್ನು ಹೆಗಲಿಗೆ ಹಾಕಿಕೊಂಡು
ಫಿರಂಗಿ ಪಾಯಿಂಟ್ ಗೆ ಇಡುವ ಕೆಲಸ ಅತಿ ಮಹತ್ವದ್ದಾಗಿದೆ.