ದಸರಾ ಮಹೋತ್ಸವ: ಅರಮನೆಗೆ ವಿದ್ಯುತ್ ಬಲ್ಬ್ ಅಳವಡಿಕೆ

1 min read

ಮೈಸೂರು,ಸೆ.27-ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆ ಭರ್ಜರಿಯಿಂದ ಸಾಗಿದೆ. ಅದರಂತೆ ಬೆಳಕಿನಿಂದ ಅರಮನೆ ಝಗಮಗಿಸಲು ವಿದ್ಯುತ್ ಬಲ್ಬ್ ಗಳನ್ನು ಅಳವಡಿಸುವ ಕಾರ್ಯ ಸಾಗಿದೆ.
ಅರಮನೆ ದೀಪಾಲಂಕಾರ ದಸರಾದ ಪ್ರಮುಖ ಆಕರ್ಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಅರಮನೆಯ ವಿದ್ಯುತ್‌ ದೀಪಗಳ ದುರಸ್ತಿ ಕಾರ್ಯ ಆರಂಭವಾಗಿದೆ.
ಕ್ರೇನ್ ಸಹಾಯದಿಂದ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಬಲ್ಬ್, ಹೋಲ್ಡರ್, ವೈರಿಂಗ್ ಅನ್ನು ಎಲೆಕ್ಟ್ರಿಷಿಯನ್ಸ್ ಸರಿಪಡಿಸುತ್ತಿದ್ದಾರೆ. ಒಡೆದು ಹೋಗಿರುವ ಬಲ್ಬ್‌ಗಳನ್ನು ತೆರವುಗೊಳಿಸಿ ಹೊಸ ಬಲ್ಬ್‌ಗಳನ್ನು ಅಳವಡಿಸಲಾಗುತ್ತಿದೆ.
ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಅರಮನೆಗೆ ಭೇಟಿ‌ ನೀಡಿ‌ ಮನಸೂರೆಗೊಳ್ಳುತ್ತಿದ್ದರು. ಅದರಲ್ಲೂ ದಸರಾ ಸಂದರ್ಭದಲ್ಲಂತೂ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿತ್ತು. ಸಂಜೆಯಾಗುತ್ತಿದ್ದಂತೆ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುವ ಅರಮನೆಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಆದರೆ ಇದಕ್ಕೆಲ್ಲ ಕೊರೊನಾ ಅಡ್ಡಿಯಾಗಿದೆ. ಕೊರೊನಾ ಹಿನ್ನೆಲೆಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ. ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ದಸರಾ ಜಂಬೂ ಸವಾರಿಯನ್ನು ಅರಮನೆಗಷ್ಟೇ ಸೀಮಿತಗೊಳಿಸಲಾಗಿದೆ. ಇದರಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಕಷ್ಟ. ದಸರಾ ಸಂದರ್ಭದಲ್ಲಿ ರಾತ್ರಿ 7 ರಿಂದ 9 ರವರೆಗೆ ದೀಪಾಲಂಕಾರವಿರಲಿದೆ. ಈ ವೇಳೆ ಅರಮನೆ ಸ್ವರ್ಗದಂತೆ ಕಾಣಿಸಲಿದೆ.
ಅಷ್ಟೇ ಅಲ್ಲದೆ ನಗರದ ಪ್ರಮುಖ ವೃತ್ತಗಳಲ್ಲಿಯೂ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸುವ ಹಾಗೂ ಇಳಿ ಬಿಡುವ ಕಾರ್ಯ ಭರದಿಂದ ಸಾಗಿದೆ.
ಇನ್ನು ಕುಶಾಲತೋಪು ತಾಲೀಮು ಭರ್ಜರಿಯಾಗಿ ಸಾಗಿದ್ದು, ಖಾಸಗಿ ದರ್ಬಾರ್ ಗೆ ಸಿದ್ಧತೆ‌‌ ಮಾಡಿಕೊಳ್ಳಲಾಗುತ್ತಿದೆ. ದರ್ಬಾರ್ ಸಭಾಂಗಣದ ಕಂಬಗಳನ್ನು ಸ್ವಚ್ಛಗೊಳಿಸುವುದು, ಬಣ್ಣ ಲೇಪನ ಮೊದಲಾದವು ನಡೆಯುತ್ತಿವೆ.

About Author

Leave a Reply

Your email address will not be published. Required fields are marked *