ಆಕ್ಸಿಜನ್ ಕಾನ್ಸನ್‌ಟ್ರೇಟರ್ ಮೂಲಕ ಸೌಮ್ಯ ಮತ್ತು ಮಧ್ಯಮ ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆ

1 min read

ಮೈಸೂರು: ಸುತ್ತಲು ಇರುವ ಗಾಳಿಯಿಂದ ಆಮ್ಲಜನಕವನ್ನು ಕೇಂದ್ರೀಕರಿಸುವ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಮೈಸೂರು ಜಿಲ್ಲೆಯಲ್ಲಿ ಬಳಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಅವರು ತಿಳಿಸಿದ್ದಾರೆ.

ಕೋವಿಡ್‌ ಎರಡನೇ ಅಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಹೆಚ್ಚಾಗಿದ್ದು, ಇದನ್ನು ಪೂರೈಸುವ ನಿಟ್ಟಿನಲ್ಲಿ ಜಿಲ್ಲೆಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಒದಗಿಸಲಾಗಿದೆ. ಸುಮಾರು ಶೇ.85 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸಿಜನ್ ಸ್ಯಾಚುರೇಷನ್ ಮಟ್ಟವನ್ನು ಹೊಂದಿರುವ ಸೌಮ್ಯ ಮತ್ತು ಮಧ್ಯಮ ಕೋವಿಡ್ -19 ರೋಗಿಗಳ ಮೇಲೆ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿ ಆಕ್ಸಿಜನ್ ಕಾನ್ಸನ್‌ಟ್ರೇಟರ್ ವಿಭಿನ್ನ ಪ್ರಮಾಣದ ಗಾಳಿಯನ್ನು ನಿರಂತರವಾಗಿ ಸೆಳೆಯಲಿದ್ದು, ಇದರಲ್ಲಿ ಎಂದಿಗೂ ಆಮ್ಲಜನಕ ಮುಗಿಯುವುದಿಲ್ಲ. ತುರ್ತು ಸಂದರ್ಭದಲ್ಲಿ ಇದು ಬಳಕೆಯಾಗಿ ಜೀವ ಉಳಿಸಲು ಸಹಕಾರಿಯಾಗಿದೆ.

ಸರ್ಕಾರ ಮೈಸೂರು ಜಿಲ್ಲೆಗೆ ಈಗ 78 ಕಾನ್ಸನ್‌ಟ್ರೇರ್ ಒದಗಿಸಿದೆ. ಸಿ‌.ಎಸ್.ಆರ್.ಯೋಜನೆಯಡಿ ವಿವಿಧ ಕಂಪನಿಗಳು ಈ ಯಂತ್ರಗಳನ್ನು ಜಿಲ್ಲಾಡಳಿತಕ್ಕೆ ನೀಡಲು ಮುಂದೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಎಲ್ಲಾ ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲೆಯ ಎಲ್ಲಾ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇವುಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *