ಹಾಲಿನ ದರ ಹೆಚ್ಚಳ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್
1 min readಮೈಸೂರು: ಹಾಲಿನ ದರ ಹೆಚ್ಚಳ ಮಾಡುವ ಪ್ರಸ್ತಾಪ ಇಲ್ಲ. ಆಯಾ ಹಾಲು ಒಕ್ಕೂಟದವರು ಲಾಭಾಂಶದಲ್ಲಿ ರೈತರಿಗೆ ಕೊಡಬಹುದು. ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡುವುದಿಲ್ಲ ಎಂದರು.
ಚಂದ್ರು ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಗೃಹ ಮಂತ್ರಿಗಳು ಸಮರ್ಥರಿದ್ದಾರೆ. ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆ ಆಗಬೇಕೆಂದು ಹೇಳಿದ್ದಾರೆ. ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಹೇಳಿದರು.
ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಯಾವುದಾದರೂಂದು ಕಾರ್ಯಕ್ರಮ ಮಾಡುತ್ತಿದೆ. ನಾವೂ ಇದ್ದೇವೆ ಎಂದು ತೋರಿಸಿಕೊಳ್ಳಲು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಅಷ್ಟೇ ಎಂದರು.
ಬಿಜೆಪಿ ಸಂಘಟನೆ ಯಾತ್ರೆ ಕುರಿತು ಮೈಸೂರು ಜಿಲ್ಲಾಧ್ಯಕ್ಷರು ಈಗಾಗಲೇ ಸಭೆ ಮಾಡಿದ್ದಾರೆ. ಮಂಗಳವಾರದಿಂದ ಕೋರ್ ಕಮಿಟಿ ಸಭೆ ನಡೆಯಲಿದೆ. ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿ ಸದಸ್ಯರು ಆಗಮಿಸಲಿದ್ದಾರೆ. ಏ.12,13ರಂದು ಪಕ್ಷದ ಆದೇಶದಂತೆ ಕಾರ್ಯಕ್ರಮ ನಡೆಯಲಿದೆ. ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ ಎಂದು ಹೇಳಿದರು.
ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸದರಾದ ಪ್ರತಾಪ್ ಸಿಂಹ ಅವರು ಆಹ್ವಾನಿಸಿದ್ದಾರೆ. ಮೈಸೂರಿನಲ್ಲಿ ಹೆಚ್ಚು ಯೋಗ ಕಾರ್ಯಕ್ರಮಗಳು ನಡೆಯುವುದರಿಂದ ಪ್ರಧಾನಿಗಳ ಮೈಸೂರು ಆಗಮನ ಸಂತೋಷದ ವಿಚಾರ. ಮೈಸೂರು ಜನತೆ ಪರವಾಗಿ ಅದ್ಧೂರಿಯಾಗಿ ಸ್ವಾಗತ ಕೋರಲಾಗುವುದು ಎಂದರು.