ಸರಗೂರಿನಲ್ಲಿ ಅತ್ಯಾಧುನಿಕ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ!
1 min read- ಸಮಾಜದಲ್ಲಿ ಏನಾದರೂ ಪರಿಣಾಮಕಾರಿಯಾಗಿ ಬದಲಾವಣೆ ತರಬೇಕೆಂದರೆ ಅದು ಉತ್ತಮ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ. ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸಾಧ್ಯವಾಗಿಸಬಹುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ತಿಳಿಸಿದರು.
ಭಾನುವಾರ ಸರಗೂರು ತಾಲ್ಲೂಕಿನ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಅತ್ಯಾಧುನಿಕ ಕೋವಿಡ್ ಕೇರ್ ಸೇಂಟರ್ ಅನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಶಿಕ್ಷಣ ಕಲಿತ ನಂತರ ಸಮಾಜಕ್ಕೆ ಏನು ಕೊಡಗೆ ನೀಡಬೇಕು ಎಂಬ ಅರಿವಿರಬೇಕು. ಎಲ್ಲವನ್ನು ಕಲಿತು ಸ್ವಾರ್ಥದಿಂದ ಬದುಕಬಾರದು. ಏನೇ ಸಮಸ್ಯೆಗಳು ಕಂಡು ಬಂದರೂ ಶಿಕ್ಷಣದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಹೆಚ್.ಡಿ.ಕೋಟೆಯು ಹಿಂದುಳಿದ ಭಾಗವಾಗಿದ್ದು, ಇಲ್ಲಿ ಇಂತಹ ಸಂಸ್ಥೆಯು ಕೋವಿಡ್ ಕಾಲದಂತಹ ಸಂಕಷ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದು ದೇಶಕ್ಕೆ ಹಾಗೂ ವಿಶ್ವಕ್ಕೆ ಮಾದರಿಯಾಗಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಉಸ್ತುವಾರಿ ಸಚಿವ ಸೋಮಶೇಖರ್ ಬಗ್ಗೆ ಮೆಚ್ಚುಗೆ:- ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಕೋವಿಡ್ ಕಾಲದಲ್ಲಿ ಸ್ವತಃ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಸರ್ವಾಂಗೀಣವಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಈ ಭಾಗದ ಜನರ ಸಮಸ್ಯೆಗಳನ್ನು ಹಾಗೂ ಕಷ್ಟಗಳಿಗೆ ಈ ಸಂಸ್ಥೆಯು ಉತ್ತಮವಾಗಿ ಸ್ಪಂದಿಸುತ್ತಿದ್ದು, ಇಲ್ಲಿನ ಜನರ ಸೇವೆಗಾಗಿ ಈ ಸಂಸ್ಥೆಯು ಹಾಗೂ ಸಂಸ್ಥೆಯ ಸಂಸ್ಥಾಪಕ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಇಲ್ಲಿನ ಶಾಸಕರಾದ ಅನೀಲ್ ಚಿಕ್ಕಮಾದು ಅವರು ತಮ್ಮ ತಂದೆಯಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೇ ಸ್ವತಃ ಪ್ರವಾಸ ಕೈಗೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಸಹ ಕೋವಿಡ್ ಕಾಲದಲ್ಲಿ 150 ಬೆಡ್ ವ್ಯವಸ್ಥೆಯುಳ್ಳ ಆಸ್ಪತ್ರೆಯನ್ನು ತೆರೆದು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಶೇ.78ರಷ್ಟು ಲಸಿಕೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಶೀಘ್ರವಾಗಿ ಲಸಿಕೆ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕ ಅನೀಲ್ ಚಿಕ್ಕಮಾದು, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆ ಸಂಸ್ಥೆಯ ಸ್ಥಾಪಕ ಡಾ.ಆರ್.ಬಾಲಸುಬ್ರಮಣ್ಯಂ ಸೇರಿದಂತೆ ಇತರರು ಹಾಜರಿದ್ದರು.