ಶೀಘ್ರದಲ್ಲೇ ಹೊಸ ಸಹಕಾರ ನೀತಿ ಜಾರಿಗೆ: ಸಚಿವ ಅಮಿತ್ ಶಾ

1 min read

ನವದೆಹಲಿ,ಸೆ.25- ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಸಹಕಾರಿ ನೀತಿಯನ್ನು ಹೊರತರಲಿದೆ ಮತ್ತು ಸಹಕಾರಿ ಚಳವಳಿಯನ್ನು ಬಲಪಡಿಸಲು ರಾಜ್ಯಗಳ ಜೊತೆ ಕೆಲಸ ಮಾಡಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ಸಹಕಾರಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ಮುಂದಿನ ಐದು ವರ್ಷಗಳಲ್ಲಿ ಪ್ರಾಥಮಿಕ ಕೃಷಿ ಪರಿಷತ್ತಿನ ಸಹಕಾರ ಸಂಘ(ಪಿಎಸಿ)ಗಳ ಸಂಖ್ಯೆಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಪ್ರಸ್ತುತ, ಸುಮಾರು 65,000 ಪಿಎಸಿಗಳಿವೆ.
ಈ ವರ್ಷದ ಜುಲೈನಲ್ಲಿ ಸಹಕಾರ ಸಚಿವಾಲಯವನ್ನು ರಚಿಸಲಾಯಿತು. ಸಹಕಾರಿ ವಲಯ ರಾಜ್ಯದ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಏಕೆ ಈ ಹೊಸ ಸಚಿವಾಲಯವನ್ನು ರಚಿಸಿತು ಎಂದು ಕೆಲವರು ಆಶ್ಚರ್ಯ ಪಡುತ್ತಾರೆ. ಆದರೆ ಅದಕ್ಕೆ ಕಾನೂನಾತ್ಮಕ ಪ್ರತಿಕ್ರಿಯೆ ನೀಡುತ್ತೇವೆ. ಈ ಬಗ್ಗೆ ನಾನು ಹೆಚ್ಚು ವಾದ ಮಾಡಲು ಬಯಸುವುದಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಹಕರಿಸುತ್ತದೆ ಮತ್ತು `ಯಾವುದೇ ಘರ್ಷಣೆ ಇರುವುದಿಲ್ಲ’ ಎಂದರು.
ರಾಜ್ಯಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗುವುದು. ಈ ಮೂಲಕ ಇಡೀ ದೇಶದ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ತರಲಾಗುವುದು ಎಂದು ಅವರು ನುಡಿದಿದ್ದಾರೆ. ಸಹಕಾರಿ ಅಧ್ಯಯನಕ್ಕಾಗಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆಯನ್ನೂ ಅಮಿತ್ ಶಾ ತೆರೆದಿಟ್ಟಿದ್ದಾರೆ.
ಗ್ರಾಮೀಣ ಸಹಕಾರಿ ಬ್ಯಾಂಕುಗಳ ಸಮಸ್ಯೆ, ತೆರಿಗೆ ಸಮಸ್ಯೆ ಇವುಗಳು ನನಗೆ ತಿಳಿದಿದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ಸಮಸ್ಯೆಗಳ ಕುರಿತಂತೆ ಪತ್ರ ಬರೆದು ನಮಗೆ ಕಳುಹಿಸಿ. ನಾನೇ ಬಂದು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಭಾರತೀಯ ಸಹಕಾರ ಕ್ಷೇತ್ರವು ಒಳ್ಳೆಯ ಬೆಳವಣಿಗೆಗೆ ವೇದಿಕೆಯಾಗಲಿದೆ. ಜಾಗತಿಕ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡುವ ಸಂಸ್ಥೆಯನ್ನು ನೀವೂ ಪ್ರಾರಂಭಿಸಬಹುದು. ಸಣ್ಣ ಮೀನುಗಾರರಿಗೆ ತಾಂತ್ರಿಕ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಸಹಕಾರಿ ಸಂಘಗಳ ಮೂಲಕ ಸಹಾಯ ಮಾಡಲಾಗುವುದು. ಸಹಕಾರಿ ಸಂಘಗಳ ಚುನಾವಣೆಯಲ್ಲಿ ಪಾರದರ್ಶಕತೆ ತರಬೇಕು. ಈ ಕುರಿತು ಮೋದಿ ಉತ್ಸುಕರಾಗಿದ್ದಾರೆ. ನಾವು ಅವರಿಗೆ ಕೈಜೋಡಿಸೋಣ ಎಂದರು.
ಈ ಸಮಾವೇಶದಲ್ಲಿ ವಿವಿಧ ಸಹಕಾರಿ ಸಂಘಗಳ 2,100 ಪ್ರತಿನಿಧಿಗಳು ಮತ್ತು ಸುಮಾರು 6 ಕೋಟಿ ಜನ ಆನ್ಲೈನ್ ಮೂಲಕ ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *