ನಂಜನಗೂಡಲ್ಲಿ ಚಿಕ್ಕಜಾತ್ರೆ ಸಂಭ್ರಮ ಹೀಗಿತ್ತು!

1 min read

ದಕ್ಷಿಣಕಾಶಿ ನಂಜನಗೂಡಿನಲ್ಲಿ ಚಿಕ್ಕಜಾತ್ರಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ಶ್ರೀಕಂಠೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್‌ರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದ್ದು, ಮುಂಜಾನೆ ಕ್ಷೀರಾಭಿಷೇಕ, ಫಲಪಂಚಾಮೃತಾಭಿಷೇಕ, ರುದ್ರಾಭಿಷೇಕ ನೆರವೇರಿಸಲಾಯಿತು.

ಮುಂಜಾನೆಯೇ ನಿತ್ಯೋತ್ಸವ, ಸಂಗಮಕಾಲ ಪೂಜೆಯ ನಂತರ ಒಳ ಆವರಣದಲ್ಲಿ ಮಹಾಗಣಪತಿ ಪೂಜೆ, ನವಗ್ರಹ ಪೂಜೆ ನೆರವೇರಿತ್ತು. ಬೆಳಿಗ್ಗೆ 6.30 ರಿಂದ 7.30 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಮಹಾಮಂಗಳಾರತಿ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಹಾಗಣಪತಿ ಚಂಡಿಕೇಶ್ವರ, ಪಾರ್ವತಿ ಶ್ರೀಕಂಠೇಶ್ವರ ಹಾಗೂ ಮನೋಅಮ್ಮಣಿನವರ ರಥೋತ್ಸವ ರಾಜಬೀದಿಯಲ್ಲಿ ಸಾಗಿತು. ವಿವಿದೆಡೆಯಿಂದ ಆಗಮಿಸಿದ ಭಕ್ತರು ಜಾತ್ರಾ ಮಹೋತ್ಸವವನ್ನ ಕಣ್ತುಂಬಿಕೊಂಡರು. ರಥಗಳು ದೇವಸ್ಥಾನವನ್ನ ಒಂದೆ ಪ್ರದಕ್ಷಿಣೆ ಹಾಕಿದ ನಂತರ ದೇಗುಲ ಸೇರಿತ್ತು.

2ವರ್ಷಗಳಿಂದ ಸ್ಥಗಿತವಾಗಿದ್ದ ನಂಜುಂಡೇಶ್ವರನ ಚಿಕ್ಕಜಾತ್ರೆ ಮತ್ತು ದೊಡ್ಡ ಜಾತ್ರೆ ಕೊರೋನಾ ಹಿನ್ನೆಲೆ ಸ್ಥಗಿತವಾಗಿತ್ತು.‌ ಜಿಲ್ಲಾಧಿಕಾರಿಗಳು ಸರ್ಕಾರದ ಅನುಮತಿ ಪಡೆದ ಬಳಿಕ ಸರಳ ರೀತಿಯಲ್ಲಿ ನಂಜುಂಡೇಶ್ವರನ ಚಿಕ್ಕ ಜಾತ್ರೆಯನ್ನು ನಡೆಸಲು ಅನುಮತಿ ಕೊಟ್ಟ ಬಳಿಕ ನಿನ್ನೆ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ಚಿಕ್ಕ ಜಾತ್ರೆ ಸಂಭ್ರಮ ಸಡಗರದಿಂದ ನೆರವೇರಿದೆ. ಇದೇವೇಳೆ ಭಕ್ತರು ಭಾಗಿಯಾಗಿ ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ.

ನಂಜುಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗಳು ಹಾಗೂ ದೇವಾಲಯದ ಮುಖ್ಯ ಅರ್ಚಕ ನಾಗಚಂದ್ರ ದೀಕ್ಷಿತ್ ಮತ್ತು ಇತರೆ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಪೂಜಾಕೈಂಕಾರ್ಯಗಳು ಅದ್ದೂರಿ ಮತ್ತು ಭರ್ಜರಿಯಾಗಿ ದೇವಾಲಯದ ಒಳಭಾಗದಲ್ಲಿ ಮುಂದುವರೆದಿದೆ.

ಇನ್ನು ಬೆಳಗಿನ ಜಾವ 6 ಘಂಟೆಯಿಂದ ದೇವಾಲಯದ ಒಳಭಾಗದಲ್ಲಿ ವಿಶೇಷ ರೀತಿಯ ಪೂಜೆ ಪುನಸ್ಕಾರ ಕೈಂಕರ್ಯಗಳು ನಡೆಯ ತೊಡಗಿವೆ, ನಂಜನಗೂಡಿನ ಪ್ರಬಾರ ತಹಸೀಲ್ದಾರ್ ಬೈರೇಗೌಡ ನೇತೃತ್ವದಲ್ಲಿ ಹೆಚ್ಚು ಪೊಲೀಸರ ನಿಯೋಜನೆ ಮಾಡಿ ಸುಸೂತ್ರವಾಗಿ ಚಿಕ್ಕಜಾತ್ರೆಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ರಾತ್ರಿ ಕೂಡ ಶ್ರೀಕಂಠೇಶ್ವರ ಸ್ವಾಮಿಗೆ ಮಹಡಿ ಉತ್ಸವ ಸೇವೆ ಅದ್ಸೂರಿಯಾಗಿ ನೆರವೇರಿಸಲಾಯಿತು. ಈ ವೇಳೆ ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ಸ್ವಾಮಿಗೆ ಬಿಲ್ವಪತ್ರೆ ಜೊತೆಗೆ ವಿಶೇಷ ದೀಪಾರತಿ ಸೇವೆ ಮಾಡಲಾಯಿತು. ಈ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು.

About Author

Leave a Reply

Your email address will not be published. Required fields are marked *