ನಂದಿನಿ ತುಪ್ಪ ತಿನ್ನೋ ಮುನ್ನ ಎಚ್ಚರ- ಶ್ರೇಷ್ಠ ಬ್ರ್ಯಾಂಡನ್ನ ನಕಲು ಮಾಡಿದ ಖದೀಮರು!
1 min readಮೈಸೂರು : ನಮ್ಮ ರಾಜ್ಯದಲ್ಲಿ ಹಾಲಿನ ಉತ್ಪನ್ನಗಳ ಅತಿದೊಡ್ಡ ಬ್ರ್ಯಾಂಡ್ ಅಂದ್ರೆ ಅದು ನಂದಿನಿ. ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಕೆಎಂಎಫ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಇದನ್ನೇ ನೆಪವಾಗಿಸಿಕೊಂಡ ಕೆಲವರು ನಂದಿನಿ ಹೆಸರಿನಲ್ಲೇ ನಕಲಿ ತುಪ್ಪ ತಿನ್ನಿಸುವ ವ್ಯವಸ್ಥಿತ ಹುನ್ನಾರ ಮಾಡಿ ಇದೀಗಾ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದೆ. ಹೌದು, ಟನ್ ಗಟ್ಟಲೇ ತುಂಬಿರುವ ಡಾಲ್ಡಾ ತುಪ್ಪ. ಲಿಲ್ಲಿ ಗೋಲ್ಡ್ ಹೆಸರಿನ ಪಾಮ್ ಆಯಿಲ್. ಕೊಳಚೆ ನೀರಿನಂತಹ ಕೆಮಿಕಲ್ ಕಲರ್. ಇದೆಲ್ಲವೂ ಸೇರಿದ್ರೆ ನಂದಿನಿ ತುಪ್ಪ ಆಗುತ್ತೆ…! ಅರೆ ಹೌದ ಅಂತ ಶಾಕ್ ಆಗ್ಬೇಡಿ. ಅಚ್ಚರಿಯಾದರೂ ಇದನ್ನ ನೀವು ನಂಬಲೇಬೇಕು.
- ಪ್ಯಾಕ್ ನೋಡಿದ್ರೆ ಥೇಟ್ ನಂದಿನಿ ತುಪ್ಪದ ಥರನೇ ಇರುತ್ತೆ. ಆದ್ರೆ ನಂದಿನಿ ತುಪ್ಪ ಅಲ್ಲ. ಇಂತಹದ್ದೊಂದು ವ್ಯವಸ್ಥಿತ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ. ಹೌದು, ಮೈಸೂರಿನ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಹೊಸಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪದ ಗೋಡೌನ್ ಪತ್ತೆಯಾಗಿದೆ. ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಸದಸ್ಯರಿಗೆ ನಕಲಿ ಜಾಲದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇಂದು ಏಕಾಏಕಿ ದಾಳಿ ನಡೆಸಿದ ಸಮಿತಿ ಸದಸ್ಯರು, ಆರೋಪಿಗಳನ್ನು ಹಿಡಿದು ಹಾಕಿದ್ದಾರೆ.
-ಇನ್ನು ತಲಾ 15 ಕೆ.ಜಿ.ತೂಕದ ಸುಮಾರು 1000 ಟಿನ್‌ಗಳು ದೊರಕಿವೆ. ರಾಶಿಗಟ್ಟಲೆ ವನಸ್ಪತಿ, ಪಾಮ್ ಆಯಿಲ್, ಕಲರಿಂಗ್ ಕೆಮಿಕಲ್, ನಂದಿನಿ ಬ್ರ್ಯಾಂಡ್ ತುಪ್ಪದ ನಕಲಿ ಕವರ್, ಪ್ಯಾಕಿಂಗ್ ಯೂನಿಟ್ ಎಲ್ಲವನ್ನೂ ಕಂಡು ಸಮಿತಿ ಸದಸ್ಯರೂ ದಂಗಾಗಿದ್ದಾರೆ. ಕೂಡಲೇ ಪೊಲೀಸರು, ಕರ್ನಾಟಕ ಹಾಲು ಉತ್ಪನ್ನಗಳ ಸಹಕಾರ ಒಕ್ಕೂಟ, ಫುಡ್ ಸೇಫ್ಟಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕೆಎಂಎಫ್ ಉತ್ಪನ್ನಗಳ ಬಗ್ಗೆಯೇ ಗ್ರಾಹಕರು ಅನುಮಾನಗೊಳ್ಳುವಂತಹ ಜಾಲವಾದ ಹಿನ್ನೆಲೆಯಲ್ಲಿ ಮೈಮುಲ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೆ ಇವರಿಗೆ ಸರಿಯಾದ ಕೈಗೊಳ್ಳುವಂತೆ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
-ತುಪ್ಪ ಆರೋಗ್ಯಕರ. ಆದ್ರೆ ಡಾಲ್ಡಾ ದೇಹಕ್ಕೆ ಅಪಾಯಕಾರಿ. ಅದರಲ್ಲೂ ಯಾವ್ಯಾವುದೋ ಎಣ್ಣೆ, ರಾಸಾಯನಿಕ ಬಣ್ಣ ಬಳಸಿದ ನಕಲಿ ತುಪ್ಪ ದೇಹದಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿಯೇ ಆಹಾರ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಇತ್ತ ಹೊಸ ಹುಂಡಿ ಗ್ರಾಮದ ವಸಂತಕುಮಾರ್ ಒಡೆತನದಲ್ಲಿ ಜಾಗ ಇದೆ. ಇದೇ ವರ್ಷದ ಜುಲೈ ತಿಂಗಳಂದು ತಮಿಳುನಾಡು ಮೂಲದ ಅಶ್ವಿನಿ ಮುರುಗೇಶನ್ ಎಂಬುವರಿಗೆ ಬಾಡಿಗೆ ಕೊಡಲಾಗಿದೆ. ಇದೇ ಜಾಗದಲ್ಲಿ ಗ್ಯಾಸ್, ಮಿಕ್ಸರ್, ಹೀಟರ್, ಪ್ಯಾಕಿಂಗ್ ಮೆಶಿನ್ ಬಳಸಿಕೊಂಡು ನಕಲಿ ನಂದಿನಿ ತುಪ್ಪ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಪೊಲೀಸರು ಕೂಡ ಆರೋಪಗಳನ್ನ ವಿಚಾರಣೆ ನಡೆಸುತ್ತಿದ್ದಾರೆ.
-ಸದ್ಯ ಘಟನಾ ಸ್ಥಳಕ್ಕೆ ಮೈಸೂರು ಎಸ್ ಪಿ ಚೇತನ್ ಹಾಗೂ ಫುಡ್ ಸೇಫ್ಟಿ ಅಧಿಕಾರಿಗಳು ಭೇಟಿ ಕೊಟ್ಟಿದ್ದು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ ಇದರ ಹಿಂದೆ ದೊಡ್ಡ ಜಾಲ ಇದೆ. ಅವರನ್ನ ಮೊದಲು ಬಂಧಿಸುವ ಕೆಲಸ ಆಗಬೇಕಿದೆ. ಒಂದು ಬೃಹತ್ ಸಂಸ್ಥೆಯ ಬ್ರ್ಯಾಂಡ್‌ನ್ನೆ ನಕಲಿ ಮಾಡಿರೋ ಖದೀಮರು ಇನ್ನು ಸಾಮಾನ್ಯ ವರ್ಗದ ಬ್ರ್ಯಾಂಡ್ ಬಿಡ್ತಾರಾ ಎಂಬ ಪ್ರಶ್ನೆ ಮೂಡಿದೆ. ಆ ಹಿನ್ನಲೆಯಲ್ಲಿ ಪೊಲೀಸರು ಕೂಡ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.
–ಇನ್ನು ಸ್ಥಳದಲ್ಲಿ ಸುಮಾರು 10ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ತಮಿಳುನಾಡು ಮೂಲದ ಆರೋಪಿ ಈ ಜಾಲದ ಕಿಂಗ್‌ಪಿನ್ ಅನ್ನುವ ಮಾಹಿತಿ ಲಭ್ಯವಾಗಿದೆ. ಕೆಎಂಎಫ್ ನಕಲಿ ಜಾಲದ ವಿರುದ್ಧ ದೂರು ನೀಡಿದ್ದು, ತನಿಖೆಯಿಂದ ಇನ್ನಷ್ಟು ವಿಚಾರಗಳು ಬೆಳಕಿಗೆ ಬರಬೇಕಿದೆ.
ಇಲ್ಲವಾದರೆ ಅಸಲಿ ಜೊತೆ ನಕಲಿ ಸೇರಿ ಬಡಪಾಯಿ ಜನರ ಆರೋಗ್ಯದ ಪರಿಣಾಮ ಬೀಳೋದಂತು ಸತ್ಯ.