ಇಂದಿನಿಂದ ಪುನೀತ್ ಡಾ.ಪುನೀತ್ ರಾಜಕುಮಾರ್!
1 min readಮೈಸೂರು ವಿವಿಯಿಂದ ದಿ.ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿಯನ್ನ ಇಂದು ಮೈಸೂರು ವಿವಿಯ 102ನೇ ಘಟಿಕೋತ್ಸವದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿಯವರು ಸ್ವೀಕರಿಸಿದ್ದಾರೆ. ಈ ವೇಳೆ ಭಾವುಕರಾದ ಅವರು ಕಣ್ಣೀರಿಟ್ಟು ಪುನೀತ್ ಅಗಲಿಕೆಯನ್ನ ನೋವನ್ನ ಹೊರಹಾಕಿದ್ದಾರೆ.
ಮೈಸೂರಿನ ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್‌ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ, ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಪುನೀತ್ ಅವರ ಪತ್ನಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, ಮರಣೋತ್ತರವಾಗಿ ಪುನೀತ್ ರಾಜ್ ಕುಮಾರ್ ಗೆ ನೀಡಲಾಗಿದ್ದಂತ ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ಬಳಿಕ ಪುನೀತ್ ನೆನೆದು ಕಣ್ಣೀರಿಟ್ಟರು.
ಈ ಬಗ್ಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂಬುದಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದಂತ ಸಂದರ್ಭದಲ್ಲಿ, ಪುನೀತ್ ಪತ್ನಿ ಅಶ್ವಿನಿ ಮಾತನಾಡಿ, ಅಂದು ಪುನೀತ್ ರಾಜ್‍ಕುಮಾರ್ ಹೇಳಿದ್ದ ಮಾತನ್ನು ನೆನಪು ಮಾಡಿಕೊಂಡ ಅವರು, ಈ ಹಿಂದೆ ಹಲವು ಬಾರಿ ಅಪ್ಪುಗೆ ಗೌರವ ಡಾಕ್ಟರೇಟ್ ನೀಡುವ ವಿಷಯ ಪ್ರಸ್ತಾಪವಾಗಿತ್ತು. ಆದರೆ, ಅವರು ಅದನ್ನು ನಯವಾಗಿಯೇ ತಿರಸ್ಕರಿಸಿದ್ದರು ಎಂದು ನೆನಪು ಮಾಡಿಕೊಂಡಿದ್ದರು.
ಇದಲ್ಲದೇ, ತಂದೆಯವರಿಗೆ ನೀಡಿದ್ದೇವೆ. ನಿಮಗೂ ಗೌರವ ಡಾಕ್ಟರೇಟ್ ನೀಡುತ್ತೇವೆ ಎಂದಾಗ, ಅವರದ್ದೇ ತೂಕ ಬೇರೆ. ನನ್ನದು ಬೇರೆ. ನಾನಿನ್ನೂ ಪ್ರಶಸ್ತಿ ಸ್ವೀಕರಿಸುವ ಮಟ್ಟಕ್ಕೆ ಬೆಳೆದಿಲ್ಲ ಎಂಬುದಾಗಿ ವಿನಯಪೂರ್ವಕವಾಗಿ ನಿರಾಕರಿಸಿದ್ದನ್ನು ಸ್ಮರಿಸಿದರು.