ವಿರೋಧದ ನಡುವೆಯು ಎನ್‌ಟಿಎಂ ಶಾಲೆ ಸ್ಥಳಾಂತರ

1 min read

ಮೈಸೂರು: ದಶಕಗಳ ಕಾಲ ಸಮಸ್ಯೆ ಆಗಿದ್ದ ಮೈಸೂರಿನ ಹೃದಯ ಭಾಗದಲ್ಲಿರುವ ಮೊದಲ ಮಹಿಳಾ ಶಾಲೆಯನ್ನ ವಿರೋಧದ ನಡುವೆಯು ಕೊನೆಗು ಸ್ಥಳಾಂತರ ಮಾಡಲಾಗಿದೆ.

ಎನ್‌ಟಿಎಂ ಶಾಲೆ ಸ್ಥಳಾಂತರ ವಿಚಾರವಾಗಿ ಸಾಕಷ್ಟು ಗೊಂದಲಗಳಿದ್ದವು. ಈ ಹಿನ್ನಲೆಯಲ್ಲಿ ಇಂದು ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳ ಸಮ್ಮುಖದಲ್ಲಿ ಎನ್ ಟಿ ಎಂ ಶಾಲೆ ಮುಂಭಾಗದ ಜೂನಿಯರ್ ಮಹಾರಾಣಿ ಕಾಲೇಜು ಆವರಣದಲ್ಲಿನ ಶಾಲೆಗೆ ಸ್ಥಳಾಂತರ‌ ಮಾಡಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಧ್ಯರ ನೇತೃತ್ವದಲ್ಲಿ ಪೀಠೋಪಕರಣಗಳನ್ನ ಸ್ಥಳಾಂತರ ಮಾಡಲು ಮುಂದಾಗಿದ್ದರು. ಆದರೆ ಇದಕ್ಕೆ ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು ಶಿಕ್ಷಣ ಇಲಾಖೆಯ ಅದೇಶ ಖಂಡಿಸಿ ಶವಾಸನ ಸತ್ಯಾಗ್ರಹ ಮಾಡಿದರು. ಇದೇ ವೇಳೆ ಪೀಠೋಪಕರಣ ಸಾಗಿಸುತ್ತಿದ್ದ ವಾಹನಕ್ಕೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದರು. ನಮ್ಮನ್ನ ರಾಜಿಗೆ ಕರೆದು ಈ ರೀತಿ ಮಾಡಿದ್ದು ಸರಿಯಲ್ಲ, ಸರ್ಕಾರದ ಆದೇಶ ಏನೇ ಮಾಡಿದ್ರು ನಮ್ಮ ಹೆಣಗಳ ಮೇಲೆ ಮಾಡಿ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಈ ಪ್ರಕ್ರಿಯೆ ನಡೆಸುವ ಕಾರಣ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು, ಶಾಲಾ ಮುಂಭಾಗದ ನಾರಾಯಣ ಶಾಸ್ತ್ರಿ ರಸ್ತೆಯನ್ನ ಸಂಪೂರ್ಣವಾಗಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಹೋರಾಟಗಾರರು, ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದರು. ಬಳಿಕ ಶಾಲೆಯಲ್ಲಿನ ಪೀಠೋಪಕರಣವನ್ನ ಲಾರಿಗೆ ತುಂಬಿಸಿ ರವಾನೆ ಮಾಡಿದರು. ಅಲ್ಲದೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿತ್ತು.

About Author

Leave a Reply

Your email address will not be published. Required fields are marked *