ಬೆಂಗಳೂರು ಮಾದರಿಯಲ್ಲಿ ಮೈಸೂರಿನಲ್ಲಿ 1960 ಗುಂಪು ಮನೆ ನಿರ್ಮಾಣ!
1 min readಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ಇಂದು ಸುದ್ದಿಗೋಷ್ಠಿ ನಡೆಸಿದರು.
ಮುಡಾ ಸಭೆಯಲ್ಲಿ ಚರ್ಚಿಸಿ ಅನುಮೋದನೆಗೊಂಡಿರುವ ವಿಷಯಗಳ ಬಗ್ಗೆ ಮಾಹಿತಿ ನೀಡಿದ ಹೆಚ್ ವಿ ರಾಜೀವ್, ಮುಡಾ ವತಿಯಿಂದ ಪ್ರಸಕ್ತ ಸಾಲಿನಲ್ಲಿ 452.60 ಕೋಟಿಗಳ ವೆಚ್ಚದಲ್ಲಿ ಒಟ್ಟು 1,960 ಗುಂಪು ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ಖುಷಿಯ ವಿಚಾರ ಹಂಚಿಕೊಂಡರು.
ವಿಜಯನಗರ ನಾಲ್ಕನೇ ಹಂತ, ದಟ್ಟಗಳ್ಳಿ 1 ನೇ ಹಂತ ಮತ್ತು ಸಾತಗಳ್ಳಿ ಬಿ ವಲಯದ ಡಾ ಬಿ ಆರ್ ಅಂಬೇಡ್ಕರ್ ನಗರ ವ್ಯಾಪ್ತಿಯಲ್ಲಿ ಗುಂಪು ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಮುಡಾದಿಂದಲೂ ಬಹುಮಹಡಿ ಮನೆಗಳನ್ನು ನಿರ್ಮಿಸಲಾಗುವುದೆಂದು ಹೆಚ್ ವಿ ರಾಜೀವ್ ತಿಳಿಸಿದರು.
ಇನ್ನು ಮೈಸೂರು ನಗರ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದಾಗಿದೆ. ಮುಂದಿನ 30 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮೈಸೂರು ನಗರಕ್ಕೆ ಮೆಟ್ರೋ ಲೈಟ್ ಅಥವಾ ಹೊಸ ಯೋಜನೆಯನ್ನು ತರುವ ಸಂಬಂಧ ಕಾರ್ಯ ಸಾಧ್ಯತಾ ವರದಿ ತಯಾರಿಸಲು ಮುಡಾದಿಂದ ಅನುಮೋದನೆ ನೀಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಮತ್ತು ಮುಡಾದ ಜಂಟಿ ಸಹಭಾಗಿತ್ವದಲ್ಲಿ ಸದರಿ ಯೋಜನೆಯನ್ನು ಸಿದ್ದಪಡಿಸಲಾಗುವುದು. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಈ ಯೋಜನೆಗಾಗಿ 18,000 ಕೋಟಿಗೂ ಹೆಚ್ಚು ಅನುದಾನವನ್ನು ಕಾಯ್ದಿರಿಸಿದ್ದು, ಮೈಸೂರು ನಗರಕ್ಕೂ ಮೆಟ್ರೋ ಲೈಟ್\ನಿಯೋ ಯೋಜನೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಮುಡಾ ಚಿಂತಿಸಿದೆ ಎಂದಿ ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ಹೇಳಿದರು.
ಖಾಸಗಿ ಬಡಾವಣೆಗೆ ಕುಡಿಯುವ ನೀರು ಯೋಜನೆ!
ಅಲ್ಲದೆ ಮುಡಾ ಹಾಗು ಮುಡಾದಿಂದ ಅನುಮೋದಿತ ಖಾಸಗಿ ಬಡಾವಣೆಗಳಿಗೆ ಕಬಿನಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಬಿದರಗೂಡು ಯೋಜನೆಯಲ್ಲಿ ಈಗಾಗಲೇ 180 ಎಂ ಎಲ್ ಡಿ ಸಾಮರ್ಥ್ಯದ ಕುಡಿಯುವ ನೀರು ಪಡೆಯಲು ಅವಕಾಶವಿದೆ. ಆದರೆ 60 ಎಂ ಎಲ್ ಡಿ ಮಾತ್ರ ಮೈಸೂರು ನಗರ ವ್ಯಾಪ್ತಿಯಲ್ಲಿ ಉಪಯೋಗಿಸಲಾಗುತ್ತಿದೆ. 180 ಎಂ ಎಲ್ ಡಿ ನೀರನ್ನು ಬಿದರಗೂಡಿನಿಂದ ಕೆಂಬಾಳು ಶುದ್ದೀಕರಣ ಘಟಕಕ್ಕೆ ಪಂಪ್ ಮಾಡಿ ತರಲು ಅಗತ್ಯವಿರುವ 70 ಕೋಟಿ ಹಣವನ್ನು ಸದರಿ ಯೋಜನೆಗೆ ಬಿಡುಗಡೆ ಮಾಡಲು ಸರ್ಕಾರದಿಂದ ಪೂರ್ವಾನುಮತಿ ಪಡೆಯುವ ಪ್ರಸ್ತಾವನೆಗೆ ಮುಡಾ ಅನುಮೋದನೆ ನೀಡಿದೆ. ಮುಂದಿನ ದಿನಗಳಲ್ಲಿ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಶುದ್ದ ಕುಡಿಯುವ ನೀರನ್ನು ಮುಡಾ ಮತ್ತು ಮುಡಾದಿಂದ ಅನುಮೋದನೆಗೊಂಡಿರುವ ಖಾಸಗಿ ಬಡಾವಣೆಗಳಿಗೆ ಪೂರೈಕೆ ಮಾಡುವ ಸಮಗ್ರ ಯೋಜನೆಗೆ ಮುಡಾ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದರು.