ಗೌಡಗೆರೆ ಚಾಮುಂಡೇಶ್ವರಿ ದೇಗುಲಕ್ಕೆ ದೇಶ ಮೆಚ್ಚುವ ಪ್ರಶಸ್ತಿ.!
1 min read
ಚನ್ನಪಟ್ಟಣ: ತಾಲ್ಲೂಕಿನ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಗೌರವ ಲಭಿಸಿದೆ.
ದೇವಾಲಯದ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಧರ್ಮದರ್ಶಿ ಶ್ರೀ ಮಲ್ಲೇಶ್ ಗುರೂಜಿ ಅವರಿಗೆ ಗೌರವ ಪ್ರದಾನ ಮಾಡಿದ ಸಂಸ್ಥೆಯ ಮುಖ್ಯಸ್ಥ ಸಾಗರ್, ಚಾಮುಂಡೇಶ್ವರಿ ವಿಗ್ರಹ ಪಂಚಲೋಹದ ವಿಗ್ರಹವಾಗಿದ್ದು, ವಿಶ್ವದಲ್ಲಿಯೇ ಅತೀ ಎತ್ತರವಾಗಿದೆ ಎಂದರು. ಅಲ್ಲದೆ ದೇವಿಯು ಶಕ್ತಿ ರೂಪಿಣಿಯಾಗಿ ನಿಂತಿರುವ ಭಂಗಿಯಲ್ಲಿರುವ ದೇಗುಲ ಎಲ್ಲಿಯೂ ಇಲ್ಲ, ಇದರ ಜೊತೆಗೆ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚಿನ ಭಕ್ತರನ್ನು ಆಕರ್ಷಸಿದ ಹಿರಿಮೆ ಹಾಗೂ ಭಕ್ತರ ಆಶಯಗಳನ್ನು ಈಡೇರಿಸಿದ ಪ್ರತೀತಿ ಹಿನ್ನೆಲೆಯಲ್ಲಿ ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲೇಶ್ ಗುರೂಜಿ ಅವರು ದೇವಿಯ ಸನ್ನಿಧಿಯಲ್ಲಿ ನಂಬಿ ಬಂದ ಭಕ್ತರಿಗೆಲ್ಲ ಅವರ ಅಪೇಕ್ಷೆಗಳು ಈಡೇರಿವೆ, ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ದಿನನಿತ್ಯ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಸನ್ನಿಧಿಯಲ್ಲಿ ಯಾವುದೇ ತಾರತಮ್ಯ ಇಲ್ಲದೆ, ಎಲ್ಲರಿಗೂ ಸಮಾನವಾಗಿ ದರ್ಶನ ಸಿಗುತ್ತಿದೆ ಎಂದರು.
ದೇವಾಲಯದಲ್ಲಿ ಪ್ರತಿನಿತ್ಯ ಆಗಮಿಸುವ ಭಕ್ತರಿಗೆ ಅನ್ನದಾಸೋಹ ಕಡ್ಡಾಯವಾಗಿ ಇರಲೇಬೇಕು ಎನ್ನುವ ಅಭಿಲಾಷೆ ನಮ್ಮದಾಗಿದೆ. ಯಾರೊಬ್ಬರೂ ಹಸಿವೆಯಿಂದ ಇರಬಾರದು, ಇದು ನಮ್ಮ ಬದ್ಧತೆಯಾಗಿದೆ ಎಂದ ಗುರೂಜಿಯವರು, ಭಕ್ತರಿಗೆ ಯಾವುದೇ ಅನಾನುಕೂಲ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.
2019ರಲ್ಲಿ ಕೋವಿಡ್ ಮಹಾಮಾರಿ ನಮ್ಮನ್ನು ಬಾಧಿಸಿದ ಸಂದರ್ಭದಲ್ಲಿ ದೇವಾಲಯದಲ್ಲಿ ಪೂಜೆಗೂ ಅವಕಾಶ ಸಿಗಲಿಲ್ಲ. ಅದರ ಹಿಂದಿನ ವರ್ಷ ದೇವಾಲಯ ಆರಂಭವಾಗಿತ್ತು. ನಂತರದ ದಿನಗಳಲ್ಲಿ ಭಕ್ತರ ಸಂಖ್ಯೆ ತಾಯಿಯ ಅನುಗ್ರಹದಿಂದ ಲಕ್ಷಾಂತರ ಭಕ್ತರು ಇಲ್ಲಿ ಆಗಮಿಸಿ ತಮ್ಮ ಅಭೀಷ್ಟೆಗಳನ್ನು ಈಡೇರಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಬುಕ್ ಆಫ್ ರೆಕಾರ್ಡ್ಸ್‌ನ ಸಗಾಯಿರಾಜು, ಸಂಘಟಕ ಸಂಜೀವ ರೆಡ್ಡಿ, ಮುಖಂಡರಾದ ಮಾಗನೂರು ಗಂಗರಾಜು, ನಿವೃತ್ತ ಪೊಲೀಸ್ ಅಧಿಕಾರಿ ರಾಮಕೃಷ್ಣಪ್ಪ, ಶ್ರೀ ಕ್ಷೇತ್ರದ ಟ್ರಸ್ಟ್‌ನ ಬಾಬು, ನಾಗರಾಜು, ನವೀನ್ ಗೌಡ, ದೀಪಕ್, ನಾಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.