ಮೈಸೂರಿನ KR ಕ್ಷೇತ್ರದಲ್ಲಿ ಆಶ್ರಯ ಮನೆಗಳ ಫಲಾನುಭವಿಗಳ ಪಟ್ಟಿ ರಿಲೀಸ್ ಮಾಡಿದ ಶಾಸಕ ರಾಮದಾಸ್!
1 min readಮೈಸೂರು : ಗಣರಾಜ್ಯ ದಿನದ ಮುನ್ನಾದಿನ ಇಂದು ಆಶ್ರಯ ಸಮಿತಿ ಅಡಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ, ಡಾ.ಅಂಬೇಡ್ಕರ್ ಯೋಜನೆ, WAMBAY ಯೋಜನೆ ಮತ್ತು ರಾಜ್ಯ ಸರ್ಕಾರದ ಅಮೃತ ಹೌಸಿಂಗ್ ಯೋಜನೆ ಎಲ್ಲಾ ಯೋಜನೆಯನ್ನು ಸಂಯುಕ್ತವಾಗಿ ಜೋಡಿಸಿ ಫಲಾನುಭವಿಗಳ ಆಯ್ಕೆಯನ್ನು ಮಾಡಲಾಗಿದ್ದು. ಫಲಾನುಭವಿಗಳ ಪಟ್ಟಿಯನ್ನು ವೆಬ್ ಸೈಟ್ ಮೂಲಕವಾಗಿ ಪ್ರಕಟ ಮಾಡುವುದು ಮತ್ತು ಅರ್ಹರಿಗೆ ಮಂಜೂರಾತಿ ಪತ್ರವನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದ 75 ವರ್ಷದ ಸುಸಂದರ್ಭದಲ್ಲಿ ಎಲ್ಲರಿಗೂ ಸ್ವಂತ ಸೂರು ಕೊಡಬೇಕೆಂಬ ಪ್ರಧಾನಿ ಮೋದಿಯವರ ಇಚ್ಛೆಯಂತೆ ಕೆ.ಆರ್.ಕ್ಷೇತ್ರದ ಆಶ್ರಯ ಸಮಿತಿ ಅಡಿಯಲ್ಲಿ ಆಯೋಜನೆ ಆದಂತಹ ಫಲಾನುಭವಿಗಳ ಲೋಕಾರ್ಪಣೆ ಕಾರ್ಯಕ್ರಮ ಇಂದು ನಡೆಯುತ್ತಿದೆ. ಇಂದು ನನಗೆ ಆನಂದದ ದಿನ, ನಾಳೆ ನಾವೆಲ್ಲರೂ ಗಣರಾಜ್ಯ ದಿನವನ್ನು ಆಚರಿಸುತ್ತಿದ್ದೇವೆ. ಕೆಂಪು ಕೋಟೆಯ ಮೇಲೆ ಧ್ವಜವನ್ನು ಹಾರಿಸಿ ಪ್ರಧಾನಿ ಮೋದಿಜಿ ಒಂದು ವಿಚಾರವನ್ನು ಕೊಟ್ಟಿದ್ದರು ಅದುವೇ ಸ್ವಂತ ಸೂರು ಎರಡನೆಯದು ಸೇಫ್ಟಿ ರೋಡ್ ದೇಶವಾಗಬೇಕು ಎಂಬ ಕಲ್ಪನೆಯನ್ನು ಕೊಟ್ಟರು ಅದನ್ನ ಇಟ್ಟುಕೊಂಡು ಮುಂದಿನ ಒಂದು ವರ್ಷದೊಳಗೆ ಯಾರ್ಯಾರು ಅರ್ಹರಿದ್ದಾರೆ, ಯಾರಿಗೆ ಅವಶ್ಯಕತೆ ಇದೆ ಎಂದು ತಿಳಿದುಕೊಂಡು ಅಂತಹವರಿಗೆ ಮನೆಯನ್ನು ನೀಡಬೇಕು ಎಂದು ಯೋಜನೆಯನ್ನ ರೂಪಿಸಿದ್ದೇವೆ.
ಸ್ವಂತ ಮನೆಗೋಸ್ಕರ ಸುಮಾರು 24 ಸಾವಿರ ಅರ್ಜಿಗಳು ಹಾಕಿದ್ದರು ಅದರಲ್ಲಿ ಪರಿಷ್ಕರಿಸಿ, ಅರ್ಹರ ಸುಮಾರು 13 ಸಾವಿರ ಜನರ ಪಟ್ಟಿಯನ್ನು ತಯಾರು ಮಾಡಿದ್ದೇವೆ. ಇದರಲ್ಲಿ 4 ರೀತಿಯ ಮನೆಗಳನ್ನು ಮಾಡಿದ್ದೇವೆ. ಅಟ್ಯಾಚ್ ಬಾತ್ ರೂಮ್ ಇದ್ದರೆ 11 ಲಕ್ಷ , 2 ರೂಮ್ ಮನೆಗೆ 14 ಲಕ್ಷ . ಶೇ.10 ರಷ್ಟು ಹಣ ನೀಡಿದರೆ ಸಾಕು ಫಲಾನುಭವಿಗಳಿಗೆ ಮನೆ ದೊರಕಲಿದೆ. 2023 ರ ಜನವರಿ 26ರ ಒಳಗೆ ಎಲ್ಲಾ ಫಲಾನುಭವಿಗಳಿಗೆ ಮನೆ ಕೀ ಕೊಡಬೇಕೆಂಬ ಆಶಯವಿದೆ. 10 ಲಕ್ಷ ರೂ ಗಳ ಮನೆಗೆ ಒಂದು ವರ್ಷದ ಒಳಗೆ ಸುಮಾರು 1 ಲಕ್ಷ ರೂ ಗಳನ್ನು ಕಟ್ಟಿದರೆ ಸಾಕು, ಸರ್ಕಾರದಿಂದ 2.5 ಲಕ್ಷ ರೂಗಳನ್ನು ನೀಡುತ್ತದೆ ಜೊತೆಗೆ ಹಲವಾರು ಬ್ಯಾಂಕ್ ಗಳೂ ಕೂಡಾ ಮುಂದೆ ಬಂದು ಫಲಾನುಭವಿಗಳಿಗೆ ಶೇ. 10% ಬಡ್ಡಿಯಲ್ಲಿ ಸಾಲವನ್ನ ಮಂಜೂರು ಮಾಡುತ್ತಿದ್ದಾರೆ. ಈ 10% ಬಡ್ಡಿಯಲ್ಲಿ 6% ಬಡ್ಡಿಯನ್ನು ಕೇಂದ್ರ ಸರ್ಕಾರವೇ ತುಂಬಿಕೊಡಲಿದೆ. ಇಡೀ ಭಾರತದಲ್ಲಿ ಕೆ.ಆರ್.ಕ್ಷೇತ್ರವನ್ನು ಸ್ವಂತ ಮನೆಯ ಕ್ಷೇತ್ರ ಎಂದು ಘೋಷಿಸುವ ಮೊದಲನೇ ಹಂತದಲ್ಲಿದ್ದೇವೆ.
ನಾನು ಮೊದಲ ಬಾರಿಗೆ ಶಾಸಕನಾಗಿ ಗೆದ್ದು ಬಂದಾಗ ನನ್ನ ತಾಯಿ ಒಂದು ಮಾತನ್ನು ಹೇಳಿದ್ದರು ನೀನು ಅಧಿಕಾರದಲ್ಲಿರುವಾಗಲೇ ಎಲ್ಲರಿಗೂ ಒಂದು ಸ್ವಂತ ಮನೆಯನ್ನು ನೀಡಬೇಕು ಎಂದು. ಈಗಾಗಲೇ 3895 ಮನೆಯನ್ನು ಕೊಟ್ಟಿದ್ದೇವೆ ಇಂದು 13 ಸಾವಿರ ಮನೆಗಳ ಫಲಾನುಭವಿಗಳಿಗೆ ಮನೆ ನೀಡಿದರೆ ಸಾರ್ಥಕವೆನಿಸುತ್ತದೆ. ಭಾರತ ದೇಶದ 7800 ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣರಾಜ ಕ್ಷೇತ್ರ ದೇಶದ ಒಂದನೆಯ ಸ್ಥಾನಕ್ಕೇರುತ್ತಿದೆ ಎಂದರೆ ಹೆಮ್ಮೆಯ ಸಂಗತಿ.
28ನೇ ಯ ತಾರೀಖು ರಾಜ್ಯದ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರ ಜನ್ಮದಿನ ಅಂದಿನ ದಿನ ಆಶ್ರಯ ಕಚೇರಿಯಲ್ಲಿ ಒಂದು ಫಾರ್ಮ್ ನೀಡುತ್ತೇವೆ ಅಲ್ಲಿ ಯಾವ ರೀತಿಯ ಮನೆ ಬೇಕು ಎಂದು ಹೇಳಬೇಕು ಇನ್ನೊಂದು ವಿಶೇಷ ಎಂದರೆ ಮನೆಯಲ್ಲಿರುವ ಮಹಿಳೆಯ ಹೆಸರಿಗೇ ಮನೆಗಳನ್ನ ನೋಂದಾವಣಿ ಮಾಡಲಿದ್ದೇವೆ ಜೊತೆಯಲ್ಲಿ ಬ್ಯಾಂಕ್ ಸಾಲ ಬೇಕು ಎನ್ನುವವರಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲವನ್ನು ಮಂಜೂರು ಮಾಡಿಸಲಿದ್ದೇವೆ. ನೂತನವಾಗಿ ನಿರ್ಮಾಣವಾಗಲಿರುವ ಮನೆಗಳಿಗೆ ಪಾರ್ಕ್, ಲೈಟ್ ವ್ಯವಸ್ಥೆ, ನೀರು, ರೋಡು ಎಲ್ಲವೂ ಬೇಕು ಅದಕ್ಕಾಗಿಯೇ ರಾಜ್ಯ ಸರ್ಕಾರದ ಜೊತೆಯೂ ಕೂಡಾ ನಾವು ನಿರಂತರ ಚರ್ಚೆಯಲ್ಲಿ ತೊಡಗಿದ್ದೇವೆ.
- ಮುಂದಿನ ದಿನಗಳಲ್ಲಿ ನಾವು ಫಲಾನುಭವಿಗಳ ಮನೆ ಬಾಗಿಲಿಗೇ ತೆರಳಿ ನಾವು ಆರ್ಡರ್ ಕಾಪಿಯನ್ನು ನೀಡಲಿದ್ದೇವೆ. ಇವತ್ತು ನಮಗೆ ಬೇಕಾಗಿರುವ 6 ಸಾವಿರ ಮನೆಗಳಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ ಇನ್ನೂ 4 ಸಾವಿರ ಮನೆಗಳು ಬೇಕಿತ್ತು ಎಂದು ಕೇಂದ್ರದ ವಸತಿ ಸಚಿವರಿಗೆ ಕೇಳಿಕೊಂಡಿದ್ದೆ. ಪ್ರಧಾನ ಮಂತ್ರಿಗಳು ಮೊನ್ನೆ ತಾನೆ ಕರ್ನಾಟಕಕ್ಕೆ 18 ಲಕ್ಷ ಮನೆಗಳನ್ನು ಘೋಷಣೆ ಮಾಡಿದ್ದು ಅತ್ಯಂತ ಖುಷಿಯ ಸಂಗತಿ.
ಇಂದು ನಾವು ಪ್ರವಾಸೋದ್ಯಮ ಗೈಡ್, ಬೀದಿ ಬದಿ ವ್ಯಾಪಾರಿ, ಸ್ತ್ರೀ ಶಕ್ತಿ ಸಂಘದ ಪ್ರತಿನಿಧಿ, ಮಹಿಳಾ ಸೆಕ್ಸ್ ವರ್ಕರ್, ಮಾನಸಿಕ ವಿಶೇಷ ಚೇತನರು, ತೃತೀಯ ಲಿಂಗದವರು, ಹೆಚ್ ಐ ವಿ ಸೋಂಕಿತರು, ಕೋವಿಡ್ ನಿಂದ ಮೃತರಾದವರ ಕುಟುಂಬದವರಿಗೆ ಮಂಜೂರಾತಿ ಪತ್ರ ನೀಡಿದ್ದೇವೆ. ನಮ್ಮ ಆಲೋಚನೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡಾ ಈ ಯೋಜನೆ ನೀಡಬೇಕು ಎಂಬುದು.
–ಸದರಿ ಕಾರ್ಯಕ್ರಮದಲ್ಲಿ ಪೂಜ್ಯ ಮಹಾಪೌರರಾದ ಶ್ರೀಮತಿ ಸುನಂದಾ ಪಾಲನೇತ್ರ, ಎಡಿಸಿ ಶ್ರೀಮತಿ ರೂಪಾ, ಆಶ್ರಯ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ಅರಸ್, ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಆಶ್ರಯ ಸಮಿತಿಗೆ ಸಂಬಂಧಪಟ್ಟ ಅಧಿಕಾರಿಗಳು, ನಗರಪಾಲಿಕಾ ಸದಸ್ಯರುಗಳು ಉಪಸ್ಥಿತರಿದ್ದರು.