ರೈಲ್ವೆ ಆಸ್ಪತ್ರೆಯಲ್ಲಿ ‘ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್’ ಆಮ್ಲಜನಕ ಉತ್ಪಾದಕ ಘಟಕ ಉದ್ಘಾಟಿಸಿದ ಸಂಸದ ಪ್ರತಾಪ್ ಸಿಂಹ

1 min read

ಮೈಸೂರು, ಅ.7-ನಗರದ ಯಾದವಗಿರಿಯಲ್ಲಿರುವ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಲಾದ ‘ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್’ 500 LPM (ಲೀಟರ್ ಪ್ರತಿ ನಿಮಿಷಕ್ಕೆ) ಆಮ್ಲಜನಕ ಉತ್ಪಾದಕ ಘಟಕವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.
ಈ ಘಟಕವನ್ನು 80 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.ಪ್ರತಾಪ್ ಸಿಂಹ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತೀಯ ರೈಲ್ವೆಯ ಪ್ರಯತ್ನಗಳನ್ನು ಶ್ಲಾಘಿಸಿದರು. ದೇಶದ 1200 ಕ್ಕೂ ಹೆಚ್ಚು ಸ್ಥಳಗಳಲ್ಲಿ ವೈದ್ಯಕೀಯ ಆಮ್ಲಜನಕದ ಘಟಕಗಳನ್ನು ಒದಗಿಸುವಲ್ಲಿ ಪ್ರಧಾನಮಂತ್ರಿಗಳ ವೈಯಕ್ತಿಕ ಆಸಕ್ತಿಗಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಮಾತನಾಡಿ, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿನ ಭಾರತೀಯ ರೈಲ್ವೆಯ ಕೊಡುಗೆಗಳನ್ನು ಇತಿಹಾಸವು ಖಂಡಿತವಾಗಿಯೂ ನೆನಪಿಸಿಕೊಳ್ಳುತ್ತದೆ. ಸಾಂಕ್ರಾಮಿಕದ ಪರೀಕ್ಷಾ ಸಮಯದುದ್ದಕ್ಕೂ, ಭಾರತೀಯ ರೈಲ್ವೆಯು ಉನ್ನತ ಮಟ್ಟದ ನೈತಿಕ ಶಕ್ತಿಯನ್ನು ಮತ್ತು ಸಂದರ್ಭಗಳಿಗೆ ತಕ್ಕಂತಹ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದರು.
ಮೈಸೂರಿನ ರೈಲ್ವೆ ಆಸ್ಪತ್ರೆಯು 101 ಹಾಸಿಗೆಗಳ ಆಸ್ಪತ್ರೆಯಾಗಿದ್ದು, 74 ಹಾಸಿಗೆಗಳನ್ನು ಕೋವಿಡ್ ರೋಗಿಗಳ ನಿರ್ವಹಣೆಗಾಗಿ ಮೀಸಲಿಡಲಾಗಿದೆ. ಈ ಮೊದಲು ಬೃಹತ್ ಆಮ್ಲಜನಕದ ಸಿಲಿಂಡರ್‌ಗಳು ಮತ್ತು ಆಮ್ಲಜನಕದ ಸಾಂದ್ರತೆ ಯಂತ್ರಗಳು ಆಸ್ಪತ್ರೆಯಲ್ಲಿ ಆಮ್ಲಜನಕದ ಅಗತ್ಯವನ್ನು ಪೂರೈಸಲು ಬಳಕೆಯಾಗುತ್ತಿದ್ದವು. 500 LPM ಆಮ್ಲಜನಕ ತಯಾರಕ ಘಟಕದ ಸ್ಥಾಪನೆಯೊಂದಿಗೆ ಆಸ್ಪತ್ರೆಯ ಎಲ್ಲ 101 ಹಾಸಿಗೆಗಳು ‘ಆಮ್ಲಜನಕ ಹಾಸಿಗೆ’ಗಳಾಗಿ ಮಾರ್ಪಟ್ಟಿವೆ. ಈ ಘಟಕವು ವಾತಾವರಣದ ಗಾಳಿಯನ್ನು ಹೀರಿಕೊಳ್ಳುವ ಮೂಲಕ ತಕ್ಷಣವಾಗಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದಿಸಬಲ್ಲದು. ಈ ಪ್ರಕ್ರಿಯೆಯು ಅತ್ಯಂತ ಪರಿಣಾಮಕಾರಿಯಾಗಿದ್ದೂ, ಇದು ಕೆಲಸ ಮಾಡಲು/ನಿರ್ವಹಿಸಲು ಸುಲಭ ಮಾತ್ರವಲ್ಲದೆ, ಪರಿಸರ ಸ್ನೇಹಿಯೂ ಆಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮೈಸೂರು ರೈಲ್ವೆ ಆಸ್ಪತ್ರೆ ಅದ್ಭುತವಾದ ಸುಧಾರಣೆಗಳನ್ನು ಕಂಡಿದೆ. ಹೊಸ ಸ್ಥಾವರದ ಸ್ಥಾಪನೆಯು ಆಸ್ಪತ್ರೆಯ ವೈದ್ಯಕೀಯ ದರ್ಜೆ ಆಮ್ಲಜನಕದ ಅಗತ್ಯವನ್ನು ಪೂರೈಸುತ್ತದೆ. ಮೈಸೂರಿನ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಸುಧಾರಿಸಲು, ವೈದ್ಯಕೀಯ ತುರ್ತುಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುವ ಇದು, ಮೂಲಸೌಕರ್ಯ ನವೀಕರಣದ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದರು.
ಭಾರತದಾದ್ಯಂತ 86 ರೈಲ್ವೆ ಆಸ್ಪತ್ರೆಗಳಲ್ಲಿನ ಸಾಮರ್ಥ್ಯ ವೃದ್ಧಿಸಲು ಯೋಜಿಸಲಾಗಿದ್ದು, ಅದರಲ್ಲಿ ಮೈಸೂರಿನ ರೈಲ್ವೆ ಆಸ್ಪತ್ರೆಯೂ ಸೇರಿದೆ. ಈ ಹೊಸ ಸೌಲಭ್ಯದಿಂದಾಗಿ, ಎಲ್ಲಾ ರೈಲ್ವೆ ಕೋವಿಡ್ ನಿರ್ವಹಣಾ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅತ್ಯಗತ್ಯವಾದ ಆಮ್ಲಜನಕ ಘಟಕ ಹೊಂದುವುದು ಸಾಧ್ಯವಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಎ. ದೇವಸಹಾಯಂ, ನೈಋತ್ಯ ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರಾದ ಜಿ.ಎಸ್. ರಾಮಚಂದ್ರ, ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *