ಕೆ.ಆರ್.ಕ್ಷೇತ್ರದ ನಿವೇಶನ ಮತ್ತು ವಸತಿ ರಹಿತರಿಗೆ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಗುದ್ದಲಿ ಪುಜೆ
1 min readಮೈಸೂರು: ಕೆ.ಆರ್.ಕ್ಷೇತ್ರದ ನಿವೇಶನ ಮತ್ತು ವಸತಿ ರಹಿತರಿಗೆ ಶಾಸಕರಾದ ಎಸ್.ಎ ರಾಮದಾಸ್ ರವರ ವಿಶೇಷ ಕಾಳಜಿಯಿಂದ ಬಾಡಿಗೆ/ಭೋಗ್ಯ ಮನೆಯಲ್ಲಿ ವಾಸಿಸುವವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ನಗರದ ಹೊರ ವಲಯದಲ್ಲಿರುವ ಗೊರೂರು ಪ್ರವೇಶದಲ್ಲಿ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ವಸತಿ ಸಚಿವರಾದ ವಿ.ಸೋಮಣ್ಣ ಮಂಗಳವಾರ ಗುದ್ದಲಿ ಪುಜೆ ನೆರವೇರಿಸಿದರು.
ರಾಜ್ಯ ಸರಕಾರದ ವಿವಿಧ ವಸತಿ ಯೋಜನೆಗಳ ಸಮನ್ವಯದೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ ಜಿ+3 ಮಾದರಿಯಲ್ಲಿ 2212 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
78.01 ಕೋಟಿ ರೂ. ವೆಚ್ಚದಲ್ಲಿ 1344 ಮನೆಗಳ ನಿರ್ಮಾಣ ಗುತ್ತಿಗೆಯನ್ನು ಬೆಂಗಳೂರಿನ ಗೌರಿ ಇನ್ಫ್ರಾ ಪ್ರೈ.ಲಿ. ಅವರಿಗೆ ಹಾಗೂ 51.38 ಕೋಟಿ ರೂ. ವೆಚ್ಚದಲ್ಲಿ 868 ಮನೆಗಳ ನಿರ್ಮಾಣದ ಗುತ್ತಿಗೆಯನ್ನು ಬೆಂಗಳೂರಿನ ಮೇವರಿಕ್ ಹೋಲ್ಡಿಂಗ್ಸ್ ಆ್ಯಂಡ್ ಇನ್ವೆಸ್ಟ್ಮೆಂಟ್ ಪ್ರೈ.ಲಿ. ಅವರಿಗೆ ವಹಿಸಲಾಗಿದ್ದು, 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.
508 ಪರಿಶಿಷ್ಟ ಜಾತಿ ಫಲಾನುಭವಿಗಳು, 207 ಪರಿಶಿಷ್ಟ ಪಂಗಡ, 203 ಅಲ್ಪ ಸಂಖ್ಯಾತರು, 845 ಹಿಂದುಳಿದ ವರ್ಗಗಳಿಗೆ, ಇತರೆ ಸಮುದಾಯಕ್ಕೆ 449 ಫಲಾನುಭವಿಗಳಿಗೆ ಮನೆ ನೀಡಲು ನಿರ್ಧಾರಿಸಲಾಗಿದೆ.
ಒಂದು ಮನೆ ನಿರ್ಮಾಣಕ್ಕೆ 4.90 ಲಕ್ಷ ರೂ. ವೆಚ್ಚ ತಗಲಿದೆ. ಹಾಲ್, ಬೆಡ್ ರೂಂ, ಅಡುಗೆ ನೆ, ಸ್ನಾನದ ಮನೆ, ಶೌಚಾಲಯ ಹಾಗೂ ಪ್ಯಾಸೇಜ್ ಸೌಲಭ್ಯ ಮನೆಯನ್ನು 277.88 ಚದರ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
2212 ಮನೆಗಳವುಳ್ಳ ಈ ಬಡಾವಣೆಗೆ ಅಗತ್ಯ ಮೂಲ ಸೌಕರ್ಯಗಳಾದ ಕುಡಿಯುವ ನೀರು ಸರಬರಾಜು, ರಸ್ತೆ, ಒಳಚರಂಡಿ, ವಿದ್ಯುತ್ಚ್ಛಕ್ತಿ, ಮಳೆ ನೀರು ಕೊಯ್ಲು ಮತ್ತು ಸಮುದಾಯ ಭವನ ನಿರ್ಮಾಣಕ್ಕೆ 158 ಕೋಟಿ ರೂ. ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ ವಿದ್ಯಾರಣ್ಯಪುರಂ ಶಾಸಕರ ಕಛೇರಿ ಎದುರಿನ ಉದ್ಯಾನವನದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಕೆ.ಆರ್ ಕ್ಷೇತ್ರದಲ್ಲಿ ೨೦ ದಿನಗಳ ಮೋದಿ ಯುಗ್ ಉತ್ಸವ್ ಕರ್ಯಕ್ರಮವನ್ನು ಆಯೋಜನೆ ಮಾಡಿದ್ದು ೧೯ ದಿನವಾದ ಇಂದು ಮಾನ್ಯ ವಸತಿ ಸಚಿವ ಹಲವು ಯೋಜನೆಗಳಿಗೆ ಚಾಲನೆ ದೊರೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮನುಷ್ಯನಿಗೆ ಬೇಕಾಗಿರುವ ಊಟ, ಬಟ್ಟೆ ಹಾಗೂ ಎಲ್ಲಕ್ಕಿಂತ ಮಿಗಿಲಾದ ಜೀವನದ ಕನಸನ್ನು ನನಸು ಮಾಡುವ ಮನೆ, ಈ ಮೂವರನ್ನು ಕೊಟ್ಟಾಗ ಮಾತ್ರ ಅಂತ್ಯೋದಯ ಕಾರ್ಯಕ್ರಮವನ್ನು ಮುಟ್ಟಲಿಕ್ಕೆ ಸಾಧ್ಯ ಎಂದು ನಮಗೆ ದೊಡ್ಡ ಸಂದೇಶವನ್ನು ಕೊಟ್ಟವರು ದೀನದಯಾಳ್ ಉಪಾಧ್ಯಯರು ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ವಿದ್ಯಾರಣ್ಯಾಪುರಂ ಉದ್ಯಾನವನದಲ್ಲಿ ತಮ್ಮದೇ ನೇತೃತ್ವದಲ್ಲಿ ಆಯೋಜಿಸಿದ್ದ `ಮೋದಿ ಯುಗ್ ಉತ್ಸವ್’ ಕಾರ್ಯಕ್ರಮದ ಅಂಗವಾಗಿ ವಸತಿ ಸಚಿವ ವಿ.ಸೋಮಣ್ಣನವರು ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇಂದು ನಾವು ಮೋದಿ ಯುಗ್ ಉತ್ಸವದ ೧೯ನೇ ದಿನಕ್ಕೆ ಕಾಲಿಟ್ಟಿದ್ದೇವೆ. ದೀನದಯಾಳ್ ಉಪಾಧ್ಯಾಯರ ಕಲ್ಪನೆಯ ಆಧಾರದ ಮೇಲೆ ಮೋದಿ ಯುಗ ಉತ್ಸವದ ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಗೆ ಜೋಡಿಸುತ್ತಾ ಬಂದಿದ್ದು, ಅದರಲ್ಲೂ ವಿಶೇಷವಾಗಿ ಕೆ.ಆರ್.ಕ್ಷೇತ್ರದಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿ ಬಂದ ದಿನದಿಂದ ಇದುವರೆಗೂ ಸುಮಾರು ೩೮೧೬ ಮನೆಗಳನ್ನು ವಿವಿಧ ಯೋಜನೆಗಳಡಿ ನಿರ್ಮಿಸಿ ಈಗಾಗಲೇ ಜನರ ವಾಸಕ್ಕೆ ನೀಡಿದ್ದು, ಈ ಎಲ್ಲಾ ಮನೆಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಆದರೆ ಇನ್ನೂ ಮುಖ್ಯವಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರ ಹೌಸಿಂಗ್ ಬೋರ್ಡ್ ಅಡಿಯಲ್ಲಿ ಬರುವ ಅಂಬೇಡ್ಕರ್,ಬಸವ, ವಾಜಪೇಯಿ ಯೋಜನೆಗಳನ್ನು ಒಂದೇ ಫ್ಲಾಟ್ಫಾರಂನಲ್ಲಿ ತರುವ ಉದ್ದೇಶದಿಂದ ನಮ್ಮ ಕೆ.ಆರ್.ಕ್ಷೇತ್ರದಲ್ಲಿ ಜಿಲ್ಲಾಧಕಾರಿಗಳು ಹಾಗೂ ನಗರ ಪಾಲಿಕೆ ಸಂಯುಕ್ತವಾಗಿ ಈಗಾಗಲೇ ಕೆ.ಆರ್.ಕ್ಷೇತ್ರದಲ್ಲಿ ಎಷ್ಟು ಜನ ಬಾಡಿಗೆ ಮನೆಯಲ್ಲಿದ್ದಾರೆ ಎಂಬುದನ್ನು ಸರ್ವೆ ಮಾಡಲಾಗಿದ್ದು, ಅದರ ಪ್ರಕಾರ ಸುಮಾರು ೮೧ ಸಾವಿರ ಮನೆಗಳಲ್ಲಿ ಎಷ್ಟು ಮಂದಿ ಬಾಡಿಗೆ ಮನೆ ಯಲ್ಲಿದ್ದಾರೆ ಎಂದು ಗುರುತಿಸಲಾಗಿದೆ. ಈಗಾಗಲೇ ೧೧ ಸಾವಿರ ಮಂದಿ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಸ್ವಂತ ಸೂರಿಗಾಗಿ ಅರ್ಜಿ ಸಲ್ಲಿದ್ದಾರೆ ಎಂದರು.
ಸೂರಿಲ್ಲದವರಿಗೆ ಸೂರು ಕೊಡುವ ಮೊದಲ ಹಂತವಾಗಿ ಇಂದು ಗೊರೂರು ಭಾಗದಲ್ಲಿ ಇಪ್ಪತ್ತೆರಡುವರೆ ಎಕರೆ ಪ್ರದೇಶದಲ್ಲಿ ಸೋಮಣ್ಣನವರು ಸ್ಲಂ ಬೋರ್ಡಿನ ಅಧಿಕಾರಿಗಳ ಜೊತೆ ಇಂದು ಭೂಮಿಪೂಜೆ ನೆರವೇರಿಸಿದ್ದಾರೆ. ೨೨೧೨ಜನ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಇವತ್ತು ಚಾಮುಂಡೇಶ್ವರಿಗೆ ಮೊದಲು ಪೂಜೆ ಸಲ್ಲಿಸಿ ನಂತರ ಇಲ್ಲಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರಲ್ಲದೆ, ಮುಂದೆ ಇಲ್ಲಿ ನಿರ್ಮಾಣವಾಗುವ ಮನೆಗಳಿಗೆ ಬೇಕಾದ ನೀರು, ಲೈಟು, ರಸ್ತೆ, ಚರಂಡಿ ಹಾಗೂ ಯುಜಿಡಿ ವ್ಯವಸ್ಥೆಗೆ ಬೇಕಾದ ಎಲ್ಲಾ ಹಣವನ್ನು ನಾನು ಮಂಜೂರು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಅವರಿಗೆ ನನ್ನ ಕೆ.ಆರ್.ಕ್ಷೇತ್ರದ ಜನತೆ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.
ನಮ್ಮ ಅಧಿಕಾರಿಗಳು ಹೇಳುವಂತೆ ಸಚಿವ ಸೋಮಣ್ಣನವರ ಅಭಿವೃದ್ಧಿ ವೇಗಕ್ಕೆ ನಾವು ಸ್ಪಂದಿಸಬೇಕಿದ್ದು, ಸಚಿವರೆ ಹೇಳುವ ಪ್ರಕಾರ ನಮ್ಮ ಸರ್ಕಾರ ಅಧಿಕಾರದಲ್ಲಿರುವ ಕೊನೆಯ ವರೆಗೆ ನಮ್ಮ ಕೆ.ಆರ್.ಕ್ಷೇತ್ರದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಮನೆನಿರ್ಮಿಸಿಕೊಟ್ಟು ವಸತಿ ಅಭಿವೃದ್ಧಿ ಕ್ಷೇತ್ರ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ನಮ್ಮ ಸಂಸದರು, ಮುಡಾ ಅಧ್ಯಕ್ಷ ರಾಜೀವ್, ಬ್ಯಾಂಕಿನ ಅಧಿಕಾರಿಗಳು ಹಾಗೂ ಸ್ಲಂಬೋರ್ಡಿನ ಕಾರ್ಯದರ್ಶಿಗಳು ಸೇರಿ ಎಲ್ಲರೂ ಸಂಯುಕ್ತವಾಗಿ ಹೆಜ್ಜೆ ಇಡುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ರಾಮದಾಸ್ ಅವರು ಯಾವಾಗಲೂ ಒಂದು ವಿಶಿಷ್ಟವಾಗಿ ಕಾರ್ಯಕ್ರಮವನ್ನು ಮಾಡುತ್ತಿರುತ್ತಾರೆ ಏನ್ ಇದರ ಗುಟ್ಟು ಎಂದು ನಾನು ಪ್ರತಾಪ್ಸಿಂಹ ಅವರನ್ನು ಕೇಳಿದಾಗ, ಅವರು ಹೇಳಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವರ ಜನಪರ ಕಾರ್ಯಕ್ರಮಗಳನ್ನು ಕೆ.ಆರ್.ಕ್ಷೇತ್ರದಲ್ಲಿ ಚಾಚೂ ತಪ್ಪದೆ ಆಚರಣೆ ಹಾಗೂ ಜಾರಿಗೆ ತರುತ್ತಾರೆ ಎಂದು ಹೇಳಿದಾಗ ನನಗೆ ತುಂಬಾ ಸಂತೋಷವಾಯಿತು.
ರಾಮ್ದಾಸ್ ಅವರಲ್ಲಿರುವ ಕ್ರಿಯಾಶೀಲತೆ ಎಲ್ಲರಿಗೂ ಬರುವುದಿಲ್ಲ. ನಾನು ಉಸ್ತುವಾರಿ ಮಂತ್ರಿಯಾಗಿದ್ದಾಗ ನನಗೆ ಎಲ್ಲಾ ರೀತಿ ಸಹಕಾರ ನೀಡಿ ಸರ್ಕಾರದ ಕಾರ್ಯಕ್ರಮಗಳು ಅನುಷ್ಠಾನ ಮಾಡಲು ಸಂಪೂರ್ಣ ಬೆಂಬಲ ನೀಡಿದ್ದಾರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಲಕ್ಷಾಂತರ ಮನೆಗಳು ಮಂಜೂರು ಮಾಡಿದ್ದರೂ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿರಲಿಲ್ಲ. ನನ್ನ ಅವಧಿಯಲ್ಲಿ ಹಿಂದಿನ ಅವಧಿಯ ೧.೮೦ ಲಕ್ಷ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ೩.೪೦ ಲಕ್ಷ ಮನೆಗಳ ನಿರ್ಮಾಣ ಕಾರ್ಯ ೮-೧೦ ತಿಂಗಳಿನಲ್ಲಿ ಪೂರ್ಣವಾಗಲಿದೆ. ಇದರಲ್ಲಿ ಕೆ.ಆರ್.ಕ್ಷೇತ್ರದಲ್ಲಿ ೨,೨೧೨ ಮನೆಗಳು ನಿರ್ಮಾಣವಾಗಲಿವೆ ಎಂದ ಅವರು, ಇಷ್ಟು ಮನೆಗಳು ೨೦೧೫-೧೬, ೨೦೧೭-೧೮ ನೇ ಸಾಲಿನಲ್ಲೆ ಮಂಜೂರಾಗಿತ್ತು. ಬುಡಕಟ್ಟು ಜನಾಂಗದವರಿಗೆ ೬೫ ಸಾವಿರ ಮನೆಗಳು ಮಂಜೂರಾಗಿದ್ದವು. ಹಿಂದಿನ ಸರ್ಕಾರಗಳು ನಿರ್ಲಕ್ಷ÷್ಯ ವಹಿಸಿದ್ದವು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿವೆ. ಫಲಾನುಭವಿಗಳು ಮನೆಗಳನ್ನು ಬಾಡಿಗೆಗೆ ಕೊಡದೆ ಮಾರಾಟ ಮಾಡದೇ ಅದರಲ್ಲಿಯೇ ವಾಸಿಸಬೇಕು ಎಂದು ಹೇಳಿದರು.
ಜನ್ದನ್ ಯೋಜನೆ, ಉಜ್ವಲಯೋಜನೆಯಂತಹ ಜನಪರ ಹಲವು ಕಾರ್ಯಕ್ರಮಗಳನ್ನು ನೀಡಿದ ಪ್ರಧಾನಮಂತ್ರಿಯವರ ಆಶಯದಂತೆ ಭಾಷೆ, ಜಾತಿ ನೋಡದೆ ಸೂರು ಅವಶ್ಯಕತೆ ಇರುವವರಿಗೆ ಮನೆ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಾನ್ಯ ಸಚಿವರಾದ ವಿ.ಸೋಮಣ್ಣ ರವರು ಸ್ಲಂ ಬೋರ್ಡ್ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಹಕ್ಕು ಖುಲಾಸೆ ಪ್ರಮಾಣ ಪತ್ರ ಹಾಗೂ ಸ್ಲಂ ಬೋರ್ಡ್ ವತಿಯಿಂದ ಅರ್ಹ ಫಲಾನುಭವಿಗಳಿಗೆ ನೀಡುತ್ತಿರುವ ಹಕ್ಕು ಪತ್ರ ಮತ್ತು ಹಕ್ಕು ಖುಲಾಸೆ ಪ್ರಮಾಣ ಪತ್ರದ ವಿತರಿಸಿದರು.
ಸಂಜೆ 5:00 ಗಂಟೆಗೆ ಮಾನ್ಯ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ ರವರು ರಸ್ತೆ ಸುರಕ್ಷತಾ ಯೋಜನೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಆಯುಕ್ತ ಲಕ್ಷಿ÷್ಮಕಾಂತರೆಡ್ಡಿ, ಹೆಚ್ಚವರಿ ಆಯುಕ್ತ ಶಶಿಕುಮಾರ್,ಲೀಡ್ ಬ್ಯಾಂಕ್ ಮ್ಯಾನೇಜರ್, ದಿಜಿಎಂ ಕೆನರಾಬ್ಯಾಂಕ್, ಮುಖಂಡರಾದ ವಡಿವೇಲು ಉಪಾಧ್ಯಕ್ಷರಾದ ಜೆ.ರವಿ, ಸಂತೋಷ್ ಶಂಭು,ನಗರಪಾಲಿಕಾ ಸದಸ್ಯರುಗಳು, ಕ್ಷೇತ್ರದ ಬಿ.ಎಲ್.ಎ ೧ ಆದ ಪ್ರಸಾದ್ ಬಾಬು, ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಮೈ.ಪುರಾಜೇಶ್, ಒ.ಬಿಸಿ ಅಧ್ಯಕ್ಷರಾದ ಶಿವಪ್ಪ, ಮುಂತಾದವರು ಹಾಜರಿದ್ದರು.