ಎಲ್ಲರಿಗೂ ಮಾದರಿ ಸಚಿವ ಎಸ್ ಟಿ ಸೋಮಶೇಖರ್; ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಶ್ಲಾಘನೆ

1 min read

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸಚಿವರಾಗಿ ಎಸ್. ಟಿ. ಸೋಮಶೇಖರ್ ಅವರು ತುಂಬಾ ಮಾದರಿಯಾದ ಕಾರ್ಯವನ್ನು ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟದ ಈ ಕಾಲದಲ್ಲಿ ತಮ್ಮ ಕ್ಷೇತ್ರದ ಜನತೆಗೆ ವೈಯಕ್ತಿಕ ಧನಸಹಾಯ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಇತರರಿಗೂ ಮಾದರಿಯಾಗಬೇಕು ಎಂದು ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಹೇರೋಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರಿಂದ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಧನ ಸಹಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಹಾಸ್ವಾಮೀಜಿಯವರು, ಸಾವುಗಳು ದುಃಖದ ವಿಚಾರ ಅದನ್ನು ಭರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಒಂದಿಷ್ಟು ಧೈರ್ಯ ತುಂಬುವ ಕೆಲಸವಾಗಲಿ ಎಂದು ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಹಣ ನೀಡುತ್ತಿರುವುದು ಶ್ಲಾಘನೀಯ ವಿಚಾರ. ಇಂಥ ಸಮಾಜಮುಖಿ ಕೆಲಸವನ್ನು ಆಯಾ ಕ್ಷೇತ್ರದ ಮುಖಂಡರು ಮಾಡಿದರೆ ಜನರು ಬೇಗ ಗುಣಮುಖರಾಗಲು ಸಹಾಯವಾಗುತ್ತದೆ. ಈ ಮೂಲಕ ನಾಡನ್ನು ಕೊರೋನಾ ಮುಕ್ತ ಮಾಡಬಹುದು ಎಂದು ಸಹ ಕಿವಿಮಾತು ಹೇಳಿದರು.

ನಿಜವಾದ ಜನ ನಾಯಕನ ಗುಣ; ಮಹಾಸ್ವಾಮೀಜಿ

ಕೋವಿಡ್ ನಿಂದ ಮೃತಪಟ್ಟರೆ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ಇಲ್ಲ. ವೈದ್ಯಕೀಯ ನೆರವು ಬಿಟ್ಟರೆ ಬೇರೆ ಸೌಲಭ್ಯ ಸಿಗುವುದಿಲ್ಲ. ಆದರೆ ಅಂಥವರ ಕಷ್ಟಗಳನ್ನು ಮನಗಂಡು ಸಚಿವರಾದ ಸೋಮಶೇಖರ್ ಅವರು ಸ್ವತಃ ವೈಯಕ್ತಿಕವಾಗಿ 1 ಲಕ್ಷ ರೂಪಾಯಿಯನ್ನು ಕೊಟ್ಟಿದ್ದಾರೆಂದರೆ, ಅವರ ಹೃದಯವಂತಿಕೆಯನ್ನು ಗೋಚರಿಸುತ್ತದೆ ಇದು ಒಬ್ಬ ನಿಜವಾದ ಜನನಾಯಕನಿಗಿರುವ ಗುಣವಾಗಿದೆ ಎಂದು ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳ ಹೇಳಿದರು.

ಸಾರ್ವಜನಿಕರು ಮಾಸ್ಕ್ ಧರಿಸುವುದಲ್ಲದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜತೆಗೆ ಕೈಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳುತ್ತಿರಬೇಕು. ಈ ಮೂಲಕ ಕೋವಿಡ್ ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಸೋಂಕು ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೆ ಧೈರ್ಯವನ್ನು ತಂದುಕೊಳ್ಳಬೇಕು ಎಂದು ಸ್ವಾಮೀಜಿಗಳು ಕರೆ ನೀಡಿದರು.

ಸಾವಿರ ಕೊರೋನಾ ವಾರಿಯರ್ಸ್ ನೇಮಕ; ಸಚಿವ ಸೋಮಶೇಖರ್

ಕೋವಿಡ್ ಸಂಕಷ್ಟಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಆಸ್ಪತ್ರೆ ಸೇರಿದಂತೆ ಹೋಮ್ ಐಸೋಲೇಷನ್ ನಲ್ಲಿರುವವರಿಗೂ ಸಹ ಅಗತ್ಯ ವ್ಯವಸ್ಥೆಯನ್ನು ಮಾಡಲಾಗಿದೆ. ಜತೆಗೆ ಕ್ಷೇತ್ರದ ಜನತೆ ಯನ್ನು ನೋಡಿಕೊಳ್ಳುವ ಸಲುವಾಗಿ 1 ಸಾವಿರ ಕೊರೋನ ವಾರಿಯರ್ಸ್ ಗಳನ್ನು ನೇಮಕ ಮಾಡಲಾಗಿದ್ದು, ಅವರಿಗೂ ಸಹ ಯಾವುದೇ ಕೊರತೆಯಾಗದಂತೆ ಬಿಸಿ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

5 ಸಾವಿರ ಮನೆಗಳಿಗೆ ಫುಡ್ – ಮೆಡಿಕಲ್ ಕಿಟ್

ಕೊರೋನಾ ಪಾಸಿಟಿವ್ ಬಂದಿರುವ ಸುಮಾರು 5 ಸಾವಿರ ಮಂದಿಯ ಕುಟುಂಬಗಳಿಗೆ ಫುಡ್ ಕಿಟ್ ಹಾಗೂ ಮೆಡಿಕಲ್ ಕಿಟ್ ಗಳನ್ನು ನೀಡುತ್ತಾ ಬಂದಿದ್ದೇನೆ. ಅವರು ಹೋಂ ಐಸೋಲೇಶನ್ ನಲ್ಲಿರುವ ಕಾರಣ ಮನೆಯಿಂದ ಹೊರಬರಲಾಗದು. ಈ ಕಾರಣಕ್ಕೆ ಇಂತಹ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು ಹೇಳಿದರು.

ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವವರೆಗೆ ಅಗತ್ಯಬಿದ್ದರೆ ಮೆಡಿಸಿನ್ ಇತ್ಯಾದಿಗಳನ್ನು ಒದಗಿಸುವುದು, ಹಣದ ಅವಶ್ಯಕತೆ ಇದ್ದ ಆಸ್ಪತ್ರೆಗೆ ತಲುಪಿಸುವಂತದ್ದು, ಅವರ ಮನೆಗಳಿಗೆ ಸ್ಯಾನಿಟೈಸ್ ಮಾಡುವಂತದ್ದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಇನ್ನೂ 2 ಹೊಸ ಕೋವಿಡ್ ಕೇರ್ ಸೆಂಟರ್; ಎಸ್ ಟಿ ಎಸ್

ಕೋವಿಡ್ ಕೇರ್ ಸೆಂಟರ್ ಗೆ ಸಂಬಂಧಪಟ್ಟಂತೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಜ್ಞಾನಭಾರತಿಯಲ್ಲಿ 341 ಬೆಡ್ ವ್ಯವಸ್ಥೆ ಇದೆ. ಇದರಲ್ಲಿ 101 ಆಕ್ಸಿಜನ್ ಬೆಡ್ ವ್ಯವಸ್ಥೆಯನ್ನು ಮಾಡಲಾಗಿದೆ. ಆರೆಸ್ಸೆಸ್ ಜನಸೇವಾದವರು ಸಲಜನಸೇವಾ ಕೇಂದ್ರದಲ್ಲಿ ಪಾಸಿಟಿವ್ ಬಂದವರಿಗಾಗಿ ನೂರು ಬೆಡ್ ವ್ಯವಸ್ಥೆಯನ್ನು ಮಾಡಿದ್ದಾರೆ. ಇನ್ನೂ ಹೆಚ್ಚಿನ ವ್ಯವಸ್ಥೆ ಬೇಕಿದ್ದರೆ ಎಂಬ ನಿಟ್ಟಿನಲ್ಲಿ ಹೇರೋಹಳ್ಳಿ ಹಾಗೂ ಕೆಂಗೇರಿಯಲ್ಲಿ 2 ನೂತನ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಅವು ಬಳಕೆಗೆ ಲಭ್ಯವಾಗಲಿವೆ. ಹೀಗಾಗಿ ಕ್ಷೇತ್ರದ ಎಲ್ಲರು ಸೇರಿದಂತೆ ಯಾರಿಗೆ ಅವಶ್ಯಕತೆ ಬಿದ್ದರೆ ಮೂರ್ನಾಲ್ಕು ದಿನಗಳಲ್ಲೇ ಒಳಗೆ ನಮಗೆ ಮಾಹಿತಿಯನ್ನು ಕೊಟ್ಟರೆ ಅವರಿಗೆ ಎಲ್ಲಿಯಾದರೂ ಒಂದು ಬೆಡ್ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಆಯಾ ವಾರ್ಡ್ ನಲ್ಲಿಯೇ ವ್ಯಾಕ್ಸಿನೇಷನ್‌ ಪಡೆಯಿರಿ

ಇನ್ನು ವ್ಯಾಕ್ಸಿನೇಷನ್ ಗೆ ಸಂಬಂಧಪಟ್ಟಂತೆ ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲೂ ಸಹ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ನಮ್ಮ ಕ್ಷೇತ್ರದಲ್ಲಿ ವ್ಯಾಕ್ಸಿನೇಷನ್ ಕೊಡುವಾಗ ನಮ್ಮ ಕ್ಷೇತ್ರದವರೆಗೆ ಮೊದಲ ಆದ್ಯತೆಯನ್ನು ಕೊಡಬೇಕು ಎಂದು ಈಗಾಗಲೇ ಸೂಚಿಸಿದ್ದೇನೆ. ಮೊದಲೆಲ್ಲ ನೂರೈವತ್ತು ವ್ಯಾಕ್ಸಿನೇಷನ್ ಲಭ್ಯವಿದ್ದರೆ ಜನ ಸೇರುತ್ತಿರಲಿಲ್ಲ. ಈಗ ಕೊರೋನ ಹೆಚ್ಚಳವಾದ ಹಿನ್ನೆಲೆಯಲ್ಲಿ ಮುನ್ನೂರು ಮಂದಿ ಸೇರಿ ಜನದಟ್ಟಣೆ ಆಗುತ್ತದೆ. ಮುಖ್ಯಮಂತ್ರಿಗಳ ಜತೆ ಸಹ ನಿನ್ನೆ ಸಭೆ ನಡೆದಿದ್ದು, ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹಲವು ಕಡೆ ಸಮರ್ಪಕವಾಗಿ ವ್ಯಾಕ್ಸಿನೇಷನ್ ಆಗುವಂತೆ ಕ್ರಮ ವಹಿಸಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಯಾ ವಾರ್ಡ್ ವಾರು ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ದಿನಕ್ಕೆ ಮುನ್ನೂರು ಮಂದಿಗೆ ಒಂದು ಕಡೆ ವ್ಯಾಕ್ಸಿನೇಷನ್‌ ಕೊಡಲಾಗುತ್ತದೆ. ಆಯಾ ವಾರ್ಡ್ ನ ವರೇ ಅಲ್ಲೇ ವ್ಯಾಕ್ಸಿನೇಷನ್ ಪಡೆದರೆ ಉತ್ತಮ. ಅಲ್ಲದೆ ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಎಲ್ಲವೂ ಸುಲಲಿತವಾಗಿ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಎಲ್ಲರಿಗೂ ವ್ಯಾಕ್ಸಿನೇಷನ್ ದೊರೆಯಲಿದೆ ಎಂದು ಸಚಿವರಾದ ಸೋಮಶೇಖರ್ ಅವರು ಹೇಳಿದರು.

About Author

Leave a Reply

Your email address will not be published. Required fields are marked *