ಮಳೆ ಹಾನಿ ಪ್ರದೇಶಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ

1 min read

ಪಿರಿಯಾಪಟ್ಟಣ/ಹೆಚ್.ಡಿ.ಕೋಟೆ: ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ಉರುಳಿ ಬಿದ್ದಿರುವ ಮನೆಗಳಿಗೆ ತೆರಳಿದ ಸಚಿವರು, ಹಾನಿಗೀಡಾದ ಮನೆಗಳಿಗೆ ತಕ್ಷಣ ಪರಿಹಾರ ಹಣ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ಪ್ರಮಾಣ, ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಂಡರು.

ಮಳೆಯಿಂದ ಹಾನಿಗೊಳಗಾದ ಮನೆಯ ಮಾಲೀಕರು ಸಚಿವರ ಬಳಿ ತಮ್ಮ ಅಳಲು ತೋಡಿಕೊಂಡಿರು. ಅವರಿಗೆ ಸಾಂತ್ವನ ಹೇಳಿದ ಸಚಿವರು ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದರು.

ನಂತರ ಹೆಚ್.ಡಿ.ಕೋಟೆ ತಾಲೂಕಿಗೆ ತೆರಳಿದ ಸಚಿವರು, ಬೀಚನಹಳ್ಳಿಯ ಕಬಿನಿ ಅಣೆಕಟ್ಟೆಯ ಬಲದಂಡೆ ಪ್ರದೇಶದ ಕೆಳಭಾಗದಲ್ಲಿ ಮುಳುಗಡೆಯಾಗಿರುವ ಸೇತುವೆಯನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯರು ವಸತಿ ಸೌಲಭ್ಯ ಕಲ್ಪಿಸುವಂತೆ ಸಚಿವರಿಗೆ ಮನವಿ ಪತ್ರ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಎಲ್ಲವೂ ಅಂತಿಮ ಹಂತದಲ್ಲಿದ್ದು ನಿವೇಶನ ಮಂಜೂರು ಆಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿರುವುದರಿಂದ ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದರು.

ಮಳೆಯಿಂದ ಮನೆ ಹಾನಿಯಾದರೆ ಜಿಲ್ಲಾಡಳಿತ ತ್ವರಿತವಾಗಿ ಪರಿಹಾರ ಕಲ್ಪಿಸಲಿದೆ.‌ ಪೂರ್ತಿ ಮನೆ ಕಳೆದುಕೊಂಡವರಿಗೆ 5 ಲಕ್ಷ, ಕಡಿಮೆ ಹಾನಿಯಾಗಿದ್ದರೆ ಹಾನಿ ಪ್ರಮಾಣದ ಮೇಲೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ ಹಲವು ಅಧಿಕಾರಿಗಳು ಜೊತೆಯಲ್ಲಿದ್ದರು.

About Author

Leave a Reply

Your email address will not be published. Required fields are marked *