ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್

1 min read

ಮೈಸೂರು: ನವೀಕರಣಗೊಂಡಿರುವ ತುಳಸಿದಾಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದ್ದು, ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬುಧವಾರ ಸಿದ್ಧತೆ ಪರಿಶೀಲಿಸಿದರು.

ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಅವರ ನೇತೃತ್ವದಲ್ಲಿ ತುಳಸಿದಾಸ್ ಆಸ್ಪತ್ರೆ ಮತ್ತು ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ತುಳಸಿದಾಸ್ ಆಸ್ಪತ್ರೆಯನ್ನು 100 ಆಕ್ಸಿಜನೇಟೆಡ್ ಹಾಸಿಗೆ ಸೌಲಭ್ಯದ ಆಸ್ಪತ್ರೆಯಾಗಿ ಮಾಡಲಾಗುತ್ತಿದೆ. ಹಗಲು ರಾತ್ರಿ ಸಿದ್ಧತೆ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ ಎಂದರು.

ಬೇಕಾದ ಸಾಮಗ್ರಿ ಸಲಕರಣೆಗಳು ಈಗಾಗಲೇ ಬಂದಿವೆ. ಶೇ. 50 ರಷ್ಟು ಸೌಲಭ್ಯವನ್ನು ಮುಡಾ ಒದಗಿಸಲಿದೆ. ಸರ್ಕಾರದಿಂದ ಬೇಕಾದ ಅನುಮೋದನೆ ಕೊಡಿಸಲಾಗುವುದು. ಸ್ವಲ್ಪ ದಿನಗಳಲ್ಲೇ ಸೇವೆಗೆ ಈ ಆಸ್ಪತ್ರೆ ಲಭ್ಯವಾಗಲಿದೆ ಎಂದರು.

ಈಗಾಗಲೇ 70 ಆಕ್ಸಿಜನೇಟೆಡ್ ಹಾಸಿಗೆಗಳಿಗೆ ಬೇಕಾದ ವ್ಯವಸ್ಥೆ ಇದೆ. ಈ ಸಾಮರ್ಥ್ಯವನ್ನು100 ಹಾಸಿಗೆಗೆ ಹೆಚ್ಚಿಸಲಾಗುತ್ತಿದೆ ಎಂದರು.

ಜಿಲ್ಲೆಗೆ ಆಕ್ಸಿಜನ್‌‌ನ 20 ಡ್ಯೂರಾ ಸಿಲಿಂಡರ್, 100 ವೆಂಟಿಲೇಟರ್‌ಗೆ ಕೇಳಿದ್ದೆವು‌ ಸಿಲಿಂಡರ್ ಬಂದಿದೆ. 100 ವೆಂಟಿಲೇಟರ್ ಮಂಜೂರು ಮಾಡಿದ್ದಾರೆ. 50 ವೆಂಟಿಲೇಟರ್ ಸದ್ಯದಲ್ಲೇ ಬರುತ್ತಿದೆ. ಖಾಸಗಿ ಆಸ್ಪತ್ರೆಗಳು ರೆಮ್ಡಿಸಿವಿರ್ ಔಷಧ ಕೇಳಿದ್ದರು. ಬೇಡಿಕೆಗೆ ಅನುಗುಣವಾಗಿ 998 ರೆಮ್ಡಿಸಿವಿರ್ ಮಂಜೂರು ಆಗಿದೆ. ಇವತ್ತು ಜಿಲ್ಲೆಗೆ ಬರುತ್ತದೆ. ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಔಷಧಿಯನ್ನು ಮೈಸೂರಿಗೆ ಹಂಚಿಕೆ ಮಾಡಲಾಗಿದೆ ಎಂದರು.

ರೆಮ್ಡಿಸಿವಿರ್ ಖಾಸಗಿ ಆಸ್ಪತ್ರೆಗೆ ಬೇಡಿಕೆ ಇರುವಷ್ಟು ಲಭ್ಯವಿದೆ. ಸಾರ್ವಜನಿಕರು ಹೆಚ್ಚು ದರ ಪಾವತಿಸುವ ಅವಶ್ಯಕತೆ ಇಲ್ಲ. ಯಾರಾದರೂ ದುರುಪಯೋಗ ಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದರು.

ಲಾಕ್‌ಡೌನ್ ಸಂದರ್ಭದಲ್ಲೂ ಪ್ರತಿ ದಿನ ಬೆಳಗ್ಗೆ 10 ಗಂಟೆವರೆಗೆ ಅತ್ಯಾವಶ್ಯಕ ವಸ್ತು ಖರೀದಿಸಲು ಅವಕಾಶವಿದೆ. ಹಾಗಾಗಿ ಒಂದೇ ದಿನ ತೆಗೆದಿಟ್ಟುಕೊಳ್ಳಬೇಕಿಲ್ಲ. ಕೊರೊನಾ ಹರಡುವ ಸರಪಳಿಯನ್ನು 14 ದಿನಗಳಲ್ಲಿ ಕಡಿತ ಮಾಡಲಾಗದಿದ್ದರೆ ಮತ್ತೆ ಲಾಕ್‌ಡೌನ್ ಮುಂದುವರಿಯುತ್ತದೆ. ಹಾಗಾಗಿ ಎಲ್ಲರೂ ಸಹಕಾರ ಮಾಡಬೇಕು ಎಂದರು.

ಹಾಸಿಗೆಗಳಿವೆ, ವೆಂಟಿಲೇಟರ್ ಇದೆ, ಆಕ್ಸಿಜನ್ ಇದೆ, ಔಷಧವಿದೆ. ಶೇ. 50 ಹಾಸಿಗೆಯನ್ನು ಖಾಸಗಿಯವರು ಕೊಟ್ಟಿದ್ದಾರೆ. ಇದರ ಪರಿಣಾಮಕಾರಿ ಜಾರಿಗಾಗಿ ಗುರುವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ನಡೆಸಲಾಗುತ್ತಿದೆ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್, ಕಾವೇರಿ ಆಸ್ಪತ್ರೆಯ ಡಾ. ಚಂದ್ರಶೇಖರ್, ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *