ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿದ ಸಚಿವ ಡಾ.ಕೆ.ಸುಧಾಕರ್
1 min readಮೈಸೂರು,ಅ.7- ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ನಿರ್ಮಿಸಲಾದ ಆಕ್ಸಿಜನ್ ಪ್ಲಾಂಟ್ ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.
ಪಿಎಂ ಕೇರ್ಸ್ ವತಿಯಿಂದ ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಿಎಂ ಕೇರ್ಸ್ ವತಿಯಿಂದ ಆಕ್ಸಿಜನ್ ಪ್ಲಾಂಟ್ಸ್ ನ್ನು ಇಡೀ ದೇಶದಲ್ಲಿ ಏಕಕಾಲಕ್ಕೆ 36ಸೆಂಟರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆಯನ್ನು ಕೊಟ್ಟಿದ್ದಾರೆ. ಅದೇ ರೀತಿ ಇಂದು ಮೈಸೂರಿನ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸಿದ್ಧವಾಗಿರುವ 1000ಎಲ್ ಪಿ ಎಂ ನ ಸಾಮರ್ಥ್ಯವಿರುವ ಪ್ಲಾಂಟ್ ಗೆ ಕೂಡ ಚಾಲನೆ ನೀಡಿದ್ದೇವೆ. ಇಡೀ ದೇಶದ 36ಕೇಂದ್ರಗಳಲ್ಲಿ ಪ್ರಾರಂಭ ಮಾಡಿದ್ದಾರೆ. ಕರ್ನಾಟಕದಲ್ಲಿ ಕೆಲವು ಕಡೆ ಆರಂಭವಾಗಿದೆ. ಮೈಸೂರು ವೈದ್ಯಕೀಯ ಕಾಲೇಜು, ಬೆಂಗಳೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ ಇವೆರಡಲ್ಲಿ ಪ್ರಾರಂಭವಾಗಿದೆ. ಮೈಸೂರು ಜಿಲ್ಲೆಯ ಜನರಿಗೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮೊದಲು ಆಕ್ಸಿಜನ್ ಅಳವಡಿಸಿದ ಹಾಸಿಗೆಗಳ ಪ್ರಮಾಣ ಕಡಿಮೆ ಇತ್ತು. ಆಕ್ಸಿಜನೇಟೆಡ್ ಬೆಡ್ಸ್ ಆಗಲಿ, ವೆಂಟಿಲೇಟರ್ ಅಳವಡಿಸಿದ ಬೆಡ್ ಗಳು ಬೇಕೆಂದು ಯಾವುದೇ ಸೋಂಕಿನಲ್ಲಿ ಮೊದಲು ಗೊತ್ತಿರಲಿಲ್ಲ. ಅಥವಾ ಉಪಯೋಗಿಸಿರಲಿಲ್ಲ. ಕೋವಿಡ್ ಬರೋದಕ್ಕಿಂತ ಮೊದಲು ನಾಲ್ಕೂವರೆ ಸಾವಿರ ಹಾಸಿಗೆಗಳು ಆಕ್ಸಿಜನೇಟೆಡ್ ಇತ್ತು. ಆದರೆ ಕಳೆದ ಆರೇಳು ತಿಂಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಸಲಾಗಿದೆ. ಇದರ ಜೊತೆ ವೆಂಟಿಲೇಟರ್ ಇರುವ ಹಾಸಿಗೆಗಳೂ ಕೂಡ ಏರಿಕೆಯಾಗಿದೆ. ನಾಲ್ಕು ಮುಕ್ಕಾಲು ಸಾವಿರದಿಂದ ಐದು ಸಾವಿರಕ್ಕೆ ಏರಿಕೆಯಾಗಿದೆ. ಹಾಗಾಗಿ ಎಲ್ಲ ಸಿದ್ಧತೆಗಳಲ್ಲಿ ಕೂಡ ಸರಿ ಸುಮಾರು 5ರಿಂದ 8ರಷ್ಟು ಹೆಚ್ಚಿಗೆ ಮಾಡಲಾಗಿದೆ. ಎರಡನೇ ಅಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬೇಕೆಂದು ನಾವ್ಯಾರು ನಿರೀಕ್ಷೆ ಮಾಡಿರಲಿಲ್ಲ. ದೇಶದಲ್ಲಿ ಕೊರತೆ ಕಂಡು ಬಂತು. ರಾಜ್ಯದಲ್ಲಿ ಸಾವಿರದ ಏಳುನೂರು ಮೆಟ್ರಿಕ್ ಟನ್ ಎರಡನೇ ಅಲೆಯಲ್ಲಿ ಬೇಕಾಯ್ತು. ಆಕ್ಸಿಜನ್ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡುವುದು, ಉತ್ಪಾದನಾ ಸಾಮರ್ಥ್ಯವನ್ನು ಕೂಡ ಹೆಚ್ಚು ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಅದರ ಭಾಗವಾಗಿ ಪಿಎಂ ಕೇರ್ಸ್ ನಿಂದ ಒಂದು ಸಾವಿರ ಲೀಟರ್ ಸಾಮರ್ಥ್ಯವಿರುವ ಪ್ಲಾಂಟ್ ಸಿದ್ಧಪಡಿಸಲಾಗಿದೆ. ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಸಮುದಾಯ ಚಿಕಿತ್ಸಾ ಕೇಂದ್ರಗಳಲ್ಲಿ ನಾವು ಆಕ್ಸಿಜನ್ ಪ್ಲಾಂಟ್ ಅಳವಡಿಸುವ ಕಾರ್ಯ ನಡೆಸಿದ್ದೇವೆ. ಸುಮಾರು 256 ಆಕ್ಸಿಜನ್ ಪ್ಲಾಂಟ್ಸ್ ನ್ನು ಇಡೀ ರಾಜ್ಯದಲ್ಲಿ ಅಳವಡಿಸುವ ಕಾರ್ಯ ನಡೆದಿದೆ. ಶೇ.60ಕ್ಕೂ ಹೆಚ್ಚು ಇಲಾಖೆ ಇಂದು ಸೇವೆಗೆ ಸಿದ್ಧಗೊಂಡಿದೆ. ಇದರ ಜೊತೆಗೆ ಆಕ್ಸಿಜನ್ ಸಿಲಿಂಡರ್ಸ್ ಒಂದೂವರೆ ಎರಡು ಸಾವಿರ ಸಿಲಿಂಡರ್ ಇತ್ತು. ಅದನ್ನು ಸುಮಾರು 16ಸಾವಿರ ಸಿಲಿಂಡರ್ ಗಳನ್ನು ನೀಡಿದ್ದೇವೆ. ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಔಷಧಿಗಳನ್ನು ಕೂಡ ಖರೀದಿ ಮಾಡಿ ಸಿದ್ಧವಿಟ್ಟುಕೊಂಡಿದ್ಧೇವೆ. ಜನರು ಯಾವುದೇ ಆತಂಕ ಇಟ್ಟುಕೊಳ್ಳಬೇಕಿಲ್ಲ, ಎಲ್ಲ ವಿಷಯದಲ್ಲೂ ಸರ್ಕಾರ ಸಿದ್ಧವಿದೆ ಎಂದರು.
ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರ 750 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ಅಮೃತ ಮಹೋತ್ಸವದ ಅಂಗವಾಗಿ ಘೋಷಣೆ ಮಾಡಿದ್ದಾರೆ. ಯಾವುದೇ ರೋಗಿ ಆಸ್ಪತ್ರೆಗೆ ಬಂದರೆ ಉತ್ಕೃಷ್ಟವಾದ ಸೇವೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಮೈಸೂರಿನಲ್ಲಿ ಲಸಿಕೆಯ ಪ್ರಮಾಣವನ್ನು ಬಹಳ ಚೆನ್ನಾಗಿ ನೀಡುತ್ತಿದ್ದಾರೆ. ಶೇ.84ಕ್ಕೂ ಹೆಚ್ಚೂ ಅಂದರೆ 84.63 ರಷ್ಟು ಇಡೀ ಜಿಲ್ಲೆಯಲ್ಲಿ ಮೊದಲ ಡೋಸ್ ನೀಡಿದ್ದೀರಿ, ನಿಮಗೆ ಅಭಿನಂದನೆಗಳು. ಅದೇ ರೀತಿ 2ನೇ ಡೋಸ್ ನ್ನು ಕೂಡ ಸುಮಾರು 39.47 % ಜನರಿಗೆ ನೀಡಿದ್ದೀರಿ ಎರಡೂ ಸೇರಿ 62.05 ಲಸಿಕೆ ನೀಡಲಾಗಿದೆ. ಲಸಿಕೆಯನ್ನು ಅತ್ಯಂತ ಭರದಿಂದ ನೀಡುತ್ತಿದ್ದೇವೆ ಎಂದರು.
ಲಸಿಕೆ ಒಂದರಿಂದಲೇ ಈ ಸಾಂಕ್ರಾಮಿಕ ರೋಗ ನಿರ್ನಾಮ ಮಾಡಲು ಸಾಧ್ಯ. ಲಸಿಕೆಯನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕು. ಮೊದಲ ಲಸಿಕೆ ಪಡೆದವರು ಕೋವಿಡ್ ಕಡಿಮೆಯಾಗುತ್ತಿರುವ ಕಾರಣ ಎರಡನೇ ಲಸಿಕೆ ಪಡೆಯಲು ಬರುತ್ತಿಲ್ಲ. ಆಲಸ್ಯ ಮಾಡುತ್ತಿದ್ದಾರೆ. ಕೋವಿಡ್ ಹೋಗಿದೆ ಎಂಬ ತಪ್ಪು ಅಭಿಪ್ರಾಯದಲ್ಲಿದ್ದಾರೆ. ಒಂದು ಡೋಸ್ ಹಾಕಿದರೆ ಸಾಕಾಗಲ್ಲ, ಎರಡನೇ ಡೋಸ್ ಕಡ್ಡಾಯವಾಗಿ ತೆಗೆದುಕೊಂಡರೆ ಸಂಪೂರ್ಣ ಹಾಕಿಸಿಕೊಂಡ ಹಾಗೆ ಮತ್ತು ಕೋವಿಡ್ ಸಂಪೂರ್ಣ ನಿರ್ನಾಮ ಮಾಡಲು ಸಾಧ್ಯ ಎಂದರು.
16% ಮಂದಿ ಮೊದಲ ಡೋಸ್, 70% ಮಂದಿ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಆರಂಭದಲ್ಲಿ ಮಂದ ಲಸಿಕೆ ನೀಡಿದೆ. 24ರಲ್ಲಿ ಲಸಿಕೆ ಪೂರ್ಣವಾಗಲಿದೆ ಎಂದು ಹಲವರು ಟೀಕೆ ಮಾಡಿದರು. ಕೇವಲ ನಾಲ್ಕೈದು ತಿಂಗಳಲ್ಲಿ 93ಕೋಟಿ ಜನರಿಗೆ ಲಸಿಕಾ ಡೋಸ್ ನೀಡಿದ್ದು,ಭಾರತೀಯರಾಗಿ ಹೆಮ್ಮೆಪಡಬೇಕು ಎಂದು ತಿಳಿಸಿದರು.
ಮುಂದುವರಿದ ದೇಶ ಅಮೇರಿಕದಲ್ಲಿಯೂ ಎಲ್ಲರಿಗೂ ಕೊಡಲಿಕ್ಕಾಗಿಲ್ಲ, ಸೆ.17ರಂದು ಸುಮಾರು ಎರಡೂವರೆ ಕೋಟಿ ಲಸಿಕೆಯನ್ನು ದೇಶದಲ್ಲಿ ನೀಡಿದ್ದೇವೆ. ಇಡೀ ಆಸ್ಟ್ರೇಲಿಯಾ ಖಂಡದಲ್ಲಿ 18ರ ವಯೋಮಾನದ ಮೇಲಿರುವ ಫಲಾನುಭವಿಗಳ ಸಂಖ್ಯೆ 2ಕೋಟಿ ಜನಸಂಖ್ಯೆ ಇದೆ. ನಮ್ಮ ದೇಶದಲ್ಲಿ ಅಷ್ಟು ಇದ್ದರೆ ಒಂದೇ ದಿವಸದಲ್ಲಿ ಲಸಿಕೆ ನೀಡಲು ಆಗುತ್ತಿತ್ತು. ಇಷ್ಟು ದೊಡ್ಡ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಿಂದ ಲಸಿಕೆ ಉಚಿತವಾಗಿ ನೀಡುವ ಕಾರ್ಯ ನಡೆದಿದೆ. ಸಂಪೂರ್ಣ ಉಚಿತವಾಗಿ ಸರ್ಕಾರ ನೀಡುತ್ತಿದೆ. ಆರೋಗ್ಯವೇ ಭಾಗ್ಯ ಎಂಬುದನ್ನು ಅರಿಯಬೇಕು. ಕೋವಿಡ್ ಬಂದಾಗ ಯಾವ ರೀತಿ ಆರೋಗ್ಯ ಮುಖ್ಯ ಎಂಬುದನ್ನು ಜನರು ಮಾತ್ರವಲ್ಲದೆ ವ್ಯವಸ್ಥೆ, ಸರ್ಕಾರಗಳು ಅರ್ಥಮಾಡಿಕೊಂಡಿದೆ. ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಅರ್ಥ ಮಾಡಿಕೊಂಡಿದೆ.
ಈ ಸಂದರ್ಭ ಡಾ .ದಾಕ್ಷಾಯಿಣಿ, ವೀಣಾ, ಅನಿಲ್ ದತ್, ಡಾ.ಉದಯ್ ಕುಮಾರ್ ಸಂಸ್ಥೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.