ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಭಾರಂಭ ಮಾಡಿದ ಮೈಸೂರು ವಾರಿಯರ್ಸ್‌!

1 min read

ಎಲ್ಲ ಆಟಗಾರರಿಗೂ ಮನೆಯಂಗಣದಂತಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿಯ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ತಂಡ ಮಂಗಳೂರು ಯುನೈಟೆಡ್‌ ವಿರುದ್ಧ 6 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದೆ.

172 ರನ್‌ಗಳ ಜಯದ ಗುರಿಹೊತ್ತ ಮೈಸೂರು ವಾರಿಯರ್ಸ್‌ ಪರ ನಾಯಕ ಕರುಣ್‌ ನಾಯರ್‌ 47 ಹಾಗೂ ಪವನ್‌ ದೇಶಪಾಂಡೆ ಅವರ ಆಕರ್ಷಕ ಅರ್ಧ ಶತಕದ (53*) ನೆರವಿನಿಂದ ಇನ್ನೂ 11 ಎಸೆತ ಬಾಕಿ ಇರುವಾಗಲೇ 4 ವಿಕೆಟ್‌ ಕಳೆದುಕೊಂಡು ತಲುಪಿತು. ಪವನ್‌ ದೇಶಪಾಂಡೆ ಹಾಗೂ ಕರುಣ್‌ ನಾಯರ್‌ 88 ರನ್‌ ಜೊತೆಯಾಟವಾಡಿ ಜಯದ ಹಾದಿಯನ್ನು ಸುಗಮಗೊಳಿಸಿದರು.

ಮಂಗಳೂರು ಸವಾಲಿನ ಮೊತ್ತ:

ನಿಕಿನ್‌ ಜೋಸ್‌ (55) ಮತ್ತು ಅಭಿನವ್‌ ಮನೋಹರ್‌ (68) ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ಮಹಾರಾಜ ಟ್ರೋಫಿಯ ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ ತಂಡ ಮೈಸೂರು ವಾರಿಯರ್ಸ್‌ ವಿರುದ್ಧ 171 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದೆ. ಟಾಸ್‌ ಗೆದ್ದ ಮೈಸೂರು ವಾರಿಯರ್ಸ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಅದೇ ರೀತಿ ಮೊದಲ ಓವರ್‌ನಲ್ಲೇ ಯಶಸ್ಸು ಕಂಡಿತು. ಯುನೈಟೆಡ್‌ನ ಆರಂಭಿ ಆಟಗಾರ ಮೆಕ್‌ನಿಲ್‌ ನೊರೋನ್ಹಾ ಶೂನ್ಯ ಸಂಪಾದನೆಯಲ್ಲಿ ಪೆವಿಲಿಯನ್‌ ಸೇರಿದರು. ಪ್ರತೀಕ್‌ ಜೈನ್‌ ಮೊದಲ ಓವರ್‌ನಲ್ಲೇ ಯಶಸ್ಸು ಕಂಡು ಮಂಗಳೂರಿಗೆ ಆಘಾತ ನೀಡಿದರು. ಹಿಂದಿನ ಒಂದು ಪಂದ್ಯ ಹೊರತಾಗಿ ಮೂರು ಪಂದ್ಯಗಳಲ್ಲಿ ರನ್‌ ಗಳಿಸುವಲ್ಲಿ ವಿಫಲರಾಗಿದ್ದ ನಾಯಕ ಸಮರ್ಥ್‌ 22 ರನ್‌ ಗಳಿಸಿ ತಂಡಕ್ಕೆ ನೆರವಾದರು. ಆದರೆ ಪ್ರತೀಕ್‌ ಜೈನ್‌ 40ರನ್‌ಗಳ ಜೊತೆಯಾಟವನ್ನು ಮುರಿಯುವಲ್ಲಿ ಸಫಲರಾಗುವುದರೊಂದಿಗೆ ಸಮರ್ಥ್‌ ಪೆವಿನಿಯನ್‌ ಹಾದಿ ಹಿಡಿದರು. ನಿಕಿನ್‌ ಜೋಸ್‌ ಅಬ್ಬರದ ಆಟಕ್ಕೆ ಮನ ಮಾಡಿ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 55 ರನ್‌ ಗಳಿಸಿ ಕುಸಿದ ತಂಡಕ್ಕೆ ನೆರವಾದರು. ಬೌಲಿಂಗ್‌ನಲ್ಲಿ ಮಿಂಚುತ್ತಿದ್ದ ಯುವ ಆಟಗಾರ ಅನೀಶ್ವರ್‌ ಗೌತಮ್‌ ಮತ್ತೊಮ್ಮೆ ವೈಫಲ್ಯದ ಹಾದಿ ಕಂಡರು. 5 ರನ್‌ ಗಳಿಸಿ ಆಡುತ್ತಿದ್ದ ಅನೀಶ್ವರ್‌ ಈ ಬಾರಿ ರನೌಟ್‌ಗೆ ಬಲಿಯಾದರು. ನಿಕಿನ್‌ ಜೋಸ್‌ ಅವರನ್ನು ಎಲ್ಬಿಗೆ ಬಲಿಯಾಗಿಸುವಲ್ಲಿ ಆದಿತ್ಯ ಗೋಯಲ್‌ ಸಫಲರಾದರು.

ಯಾವಾಗಲೂ ತಂಡ ಸಂಕಷ್ಟದಲ್ಲಿದ್ದಾಗ ನೆರವಾಗು ನಂಬುಗೆಯ ಆಟಗಾರ ಅಭಿನವ್‌ ಮನೋಹರ್‌ ಮಿಂಚಿನ ಆಟ ಪ್ರದರ್ಶಿಸಿ ತಂಡದ ಸವಾಲಿನ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 35 ಎಸೆತಗಳನ್ನೆದುರಿಸಿದ ಅಭಿನವ್‌, 5 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ 68 ರನ್‌ ಗಳಿಸಿ ವಿದ್ಯಾಧರ ಪಾಟೀಲ್‌ಗೆ ವಿಕೆಟ್‌ ಒಪ್ಪಿಸಿದರು. ಅನುಭವಿ ಆಟಗಾರ ಅಮಿತ್‌ ವರ್ಮಾ ಕೇವಲ 5 ರನ್‌ ಗಳಿಸಿ ರನೌಟ್‌ಗೆ ಬಲಿದಾದದ್ದು ಮಂಗಳೂರಿನ ರನ್‌ ಗಳಿಕೆಗೆ ಕಡಿವಾಣ ಹಾಕಿದಂತಾಯಿತು. ಅಂತಿಮವಾಗಿ ಮಂಗಳೂರು ಯುನೈಟೆಡ್‌ 7 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತು. ಮೈಸೂರು ವಾರಿಯರ್ಸ್‌ ಪರ ಪ್ರತೀಕ್‌ ಜೈನ್‌ 31ಕ್ಕೆ 2 ಮತ್ತು ಆದಿತ್ಯ ಗೋಯಲ್‌ 41ಕ್ಕೆ 2 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌:
ಮಂಗಳೂರು ಯುನೈಟೆಡ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 171 (ಸಮರ್ಥ್‌ 22, ನಿಕಿನ್‌ ಜೋಸ್‌ 55, ಅಭಿನವ್‌ ಮನೋಹರ್‌ 68, ಪ್ರತೀಕ್‌ ಜೈನ್‌ 31ಕ್ಕೆ 2, ಆದಿತ್ಯ ಗೋಯಲ್‌ 41ಕ್ಕೆ 2)
ಮೈಸೂರು ವಾರಿಯರ್ಸ್‌: 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 172 ರನ್‌ (ಪವನ್‌ ದೇಶಪಾಂಡೆ 53, ಕರುಣ್‌ ನಾಯರ್‌ 47, ನಿಹಾಲ್‌ ಉಳ್ಳಾಲ್‌ 25, ಎಸ್‌.ಶೇಷಾದ್ರಿ 21 ಶರತ್‌ 32ಕ್ಕೆ 2, ವೆಂಕಟೇಶ್‌ 20ಕ್ಕೆ 2)

About Author

Leave a Reply

Your email address will not be published. Required fields are marked *