ಬೆಂಗಳೂರು ಬ್ಲಾಸ್ಟರ್ಸ್ ಗೆ ಭರ್ಜರಿ ಜಯ!

1 min read

ಬೆಂಗಳೂರು ಬ್ಲಾಸ್ಟರ್ಸ್ ಗೆ ಭರ್ಜರಿ ಜಯ
ಮೈಸೂರು : ಆಗಸ್ಟ್‌, 15, 2022: ಮಹಾರಾಜ ಟ್ರೋಫಿಯ 17ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಂಗಳೂರು ಯುನೈಟೆಡ್ ವಿರುದ್ಧ 66 ರನ್ ಗಳ ಭರ್ಜರಿ ಜಯ ಗಳಿಸಿದೆ. 192 ರನ್ ಬೃಹತ್ ಮೊತ್ತವನ್ನು ಬೆಂಬತ್ತಿದ ಮಂಗಳೂರು ಯುನೈಟೆಡ್ 16 ಓವರ್ ಗಳಲ್ಲಿ ಕೇವಲ 125 ರನ್ ಗಳಿಸಿ ಸರ್ವ ಪತನ ಕಂಡಿತು.

ನಾಯಕ ಆರ್. ಸಮರ್ಥ್ 32, ಅಭಿನವ್ ಮನೋಹರ್ 23 ಹಾಗೂ ಶರತ್ ಅಜೇಯ 22 ರನ್ ಹೊರತುಪಡಿಸಿದರೆ ಉಳಿದ ಆಟಗಾರರು ಬೆಂಗಳೂರು ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಬೆಂಗಳೂರು ಪರ ಪ್ರದೀಪ್ ಹಾಗೂ ರಿಶಿ ಬೋಪಣ್ಣ ತಲಾ 3 ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮಿಂಚಿದ ಜೋಶಿ, ಬೆಂಗಳೂರು ಬೃಹತ್‌ ಮೊತ್ತ:
ಅನಿರುಧ್‌ ಜೋಶಿ ಅವರ ಮಿಂಚಿನ ಅರ್ಧ ಶತಕ (57)ದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಂಗಳೂರು ಯುನೈಟೆಡ್‌ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿ ಕಠಿಣ ಸವಾಲು ನೀಡಿದೆ. ಕೇವಲ 24 ಎಸೆತಗಳನ್ನು ಎದುರಿಸಿದ ಜೋಶಿ, 7 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಅಜೇಯ 57 ರನ್‌ ಸಿಡಿಸಿ ಬೃಹತ್‌ ಮೊತ್ತಕ್ಕೆ ನೆರವಾದರು. ಆರಂಭಿಕ ಆಟಗಾರ ಎಲ್‌.ಆರ್‌.ಚೇತನ್‌ ಅವರನ್ನು ಹೊರತುಪಡಿಸಿದರೆ ಉಳಿದ ಆಟಗಾರರು ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದರು. ಟಾಸ್‌ ಗೆದ್ದ ಮಂಗಳೂರು ಯುನೈಟೆಡ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಯುವ ಬೌಲರ್‌ ಅನೀಶ್ವರ್‌ ಗೌತಮ್‌ ಆರಂಭಿಕ ಜೊತೆಯಾಟವನ್ನು ಬೇಗನೇ ಮುರಿಯಲ್ಲಿ ಯಶಸ್ವಿಯಾದರು. ಆದರೆ ನಾಯಕ ಮಯಾಂಕ್‌ ಅಗರವಾಲ್‌ (47) ಹಾಗೂ ಕೆ.ವಿ. ಅನೀಶ್‌ (40) 74 ರನ್‌ ಜೊತೆಯಾಟವಾಡಿ ಉತ್ತಮ ರನ್‌ ಸರಾಸರಿಯನ್ನು ಕಾಯ್ದುಕೊಂಡರು. ಶಶಿಕುಮಾರ್‌ ತಮ್ಮ ಬೌಲಿಂಗ್‌ನಲ್ಲಿ ಮಯಾಂಕ್‌ ಅವರ ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾದರು.

ಆದರೆ ಬೆಂಗಳೂರಿನ ರನ್‌ ಗಳಿಕೆಗೆ ಕಡಿವಾಣ ಹೇರಲಾಗಲಿಲ್ಲ. ಅನೀಶ್‌ 32 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 40 ರನ್‌ ಗಳಿಸಿ ನಾಯಕನಿಗೆ ಉತ್ತಮ ರೀತಿಯಲ್ಲಿ ಸಾಥ್‌ ನೀಡಿದರು. ಶಿವಕುಮಾರ್‌ ರಕ್ಷಿತ್‌ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಮೂಲಕ 34 ರನ್‌ ಗಳಿಸಿ ಅನಿರುಧ್‌ ಜೋಶಿಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದರು. ಉತ್ತಮ ಆಲ್ರೌಂಡರ್‌ ಜೋಶಿ, ಅಬ್ಬರದ ಬ್ಯಾಟಿಂಗ್‌ ಬೆಂಗಳೂರಿನ ಬೃಹತ್‌ ಮೊತ್ತಕ್ಕೆ ನೆರವಾಯಿತು. 237.50 ಸ್ಟ್ರೈಕ್‌ ರೇಟ್‌ ಮೂಲಕ ಜೋಶಿ ಅಜೇರಾಗಿ ಉಳಿದರು. ಬೆಂಗಳೂರು ಬ್ಲಾಸ್ಟರ್ಸ್‌ 4 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿತು. ಈ ಹಿಂದಿನ ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ 193 ರನ್‌ ಗುರಿ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು. ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ 191 (ಮಯಾಂಕ್‌ ಅಗರ್ವಾಲ್‌ 47, ಅನೀಶ್‌ 40, ಶಿವಕುಮಾರ್‌ ರಕ್ಷಿತ್‌ 34, ಅನಿರುಧ್‌ ಜೋಶಿ 57 ಅನೀಶ್ವರ್‌ ಗೌತಮ್‌ 25ಕ್ಕೆ 1, ಶರತ್‌ 49ಕ್ಕೆ 1, ಶಶಿಕುಮಾರ್‌ 21ಕ್ಕೆ 1, ಆದಿತ್ಯ ಸೋಮಣ್ಣ 19ಕ್ಕೆ 1)
ಮಂಗಳೂರು ಯುನೈಟೆಡ್‌: 16 ಓವರ್ ಗಳಲ್ಲಿ 125 ( ಸಮರ್ಥ 32, ಅಭಿನವ್ ಮನೋಹರ್ 23, ಶರತ್ 22* ಬೋಪಣ್ಣ 26 ಕ್ಕೆ 3, ಪ್ರದೀಪ್ 20ಕ್ಕೆ3)

About Author

Leave a Reply

Your email address will not be published. Required fields are marked *