ಲಾರಿ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣ: ಇಬ್ಬರ ಬಂಧನ
1 min readಮೈಸೂರು,ಜ.15-ಲಾರಿ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕೆ.ಎ-41-ಸಿ-5387 ಟಯೋಟೋ ಈಟಿಯೋಸ್ ಕಾರು ಹಾಗೂ 2,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಜ.6 ರಂದು ಕೇರಳ ರಾಜ್ಯದ ಲಾರಿ ಚಾಲಕ ತುಮಕೂರಿನ ಸನ್ ವೀಕ್ ಕಂಪನಿಯಲ್ಲಿ ಕಬ್ಬಿಣವನ್ನು ತುಂಬಿಕೊಂಡು ಕುಣಿಗಲ್, ಮದ್ದೂರು ಮೈಸೂರು ಮಾರ್ಗವಾಗಿ ಕೇರಳ ರಾಜ್ಯದ ಕೂತುಪುರಂಗೆ ಬಿಳಿಕೆರೆ ಗ್ರಾಮದ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ರಾತ್ರಿ 10.45 ಗಂಟೆ ಸಮಯದಲ್ಲಿ ಮೈಸೂರು ಕಡೆಯಿಂದ ಕಾರಿನಲ್ಲಿ ಬಂದ 5 ಮಂದಿ ಅಪರಿಚಿತರು ಲಾರಿಯನ್ನು ಅಡ್ಡಗಟ್ಟಿ, ಅದರ ಚಾಲಕನಿಗೆ ಹೊಡೆದು, ಆತನ ಬಳಿಯಿದ್ದ 10,000 ರೂ. ನಗದು, ಲಾರಿ ಕೀ ಹಾಗೂ ರಿಯಲ್ ಮೀ ಮೊಬೈಲ್ ಕಿತ್ತುಕೊಂಡು ಹೋಗಿದ್ದರು.
ಈ ಕುರಿತು ಲಾರಿ ಚಾಲಕ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸೂಚನೆಯಂತೆ ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್, ಡಿಎಸ್ಪಿ ರವಿಪ್ರಸಾದ್ ಮಾರ್ಗದರ್ಶನದಂತೆ ಪೊಲೀಸ್ ನಿರೀಕ್ಷಕ ರವಿಕುಮಾರ್ ನೇತೃತ್ವದ ತಂಡವು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.