ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಪಾರಂಪರಿಕ ಕಟ್ಟಡ ಪರಿವೀಕ್ಷಣೆ ಮಾಡಿದ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್
1 min readಮೈಸೂರು: ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬಸವರಾಜು ಬೈರತಿ ಅವರು ಶುಕ್ರವಾರ ದೇವರಾಜ ಮಾರುಕಟ್ಟೆ, ಪುರಭವನದ ಕಾಮಗಾರಿ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳನ್ನು ಪರಿಶೀಲಿಸಿದರು.
ಪುರಭವನದಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಗಿಸಿ ಸಾರ್ವಜನಿಕರ ಸೇವೆಗೆ ಒದಗಿಸಲಾಗುವುದು. ಎಲ್ಲೂ ನೀರಿನ ಸಂಗ್ರಹಣೆ ಆಗದಂತೆ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸಚಿವ ಬಸವರಾಜು ಬೈರತಿ ಅವರು ಮಾತನಾಡಿ, ಲ್ಯಾನ್ಸ್ ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದ್ದು, ಅಂತಿಮ ನಿರ್ಣಯ ತೆಗೆದುಕೊಂಡ ನಂತರ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದರು.
ಲ್ಯಾನ್ಸ್ ಡೌನ್ ಕಟ್ಟಡವು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಪಾರಂಪರಿಕ ಶೈಲಿಯಲ್ಲಿಯಲ್ಲಿ, ಅದೇ ಮಾದರಿಯಲ್ಲಿ ಕಟ್ಟಡವನ್ನು ನವೀಕರಣ ಮಾಡುವ ಯೋಜನೆಯ ಬಗ್ಗೆ ಚಿಂತಿಸಲಾಗುವುದು. ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಿ ನಗರದ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡು ಏನೇನು ಮಾಡಬೇಕೆಂಬುದನ್ನು ಚರ್ಚಿಸಲಾಗುವುದು ಎಂದರು.
ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಮಹಾಪೌರರಾದ ಅನ್ವರ್ ಬೇಗ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪಾಲಿಕೆಯ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್, ಮುಡಾ ಅಧೀಕ್ಷಕ ಇಂಜಿನಿಯರ್ ಶಂಕರ್, ಸೇರಿದಂತೆ ಇತರರು ಹಾಜರಿದ್ದರು.