ಲೇಖಕಿ ಪ್ರೊ.ಕೆ.ಸುಮಿತ್ರಾಬಾಯಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ
1 min readಮೈಸೂರು,ಸೆ.27-ಲೇಖಕಿ ಪ್ರೊ.ಕೆ.ಸುಮಿತ್ರಾಬಾಯಿ ಅವರಿಗೆ ಇಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಕುವೆಂಪುನಗರದ ನವಿಲು ರಸ್ತೆಯ ಅವರ ಮನೆಯಲ್ಲಿ ಪ್ರಶಸ್ತಿ ನೀಡಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡಿದ 2018ನೇ ಸಾಲಿನ ಲೇಖಕರ ಮೊದಲ ಸ್ವತಂತ್ರ ಕೃತಿ ವಿಭಾಗದಲ್ಲಿ ಅತ್ಯುತ್ತಮ ಕೃತಿಯೆಂದು ಅವರ ‘ಸೂಲಾಡಿ ಬಂದೋ ತಿರು ತಿರುಗೀ’ ಪುಸ್ತಕಕ್ಕೆ ಬಹುಮಾನ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಮಿತ್ರಾ ಬಾಯಿ ಅವರು, ಮಹಿಳೆಯರು ಸವಾಲುಗಳನ್ನು ಎದುರಿಸಿ ಮುಂದೆ ಬರಬೇಕು. ಶಿಕ್ಷಣ ಪಡೆಯಲು ಮಹಿಳೆಯರಿಗೆ ಆಸಕ್ತಿ ಇದ್ದರೂ ಮುಂದುವರೆಸಲಾಗುವುದಿಲ್ಲ. ಇದು ಹಿಂದೆ, ಇಂದು, ಮುಂದೆಯೂ ಇರುತ್ತದೆ. ಆದರೆ ಸವಾಲುಗಳನ್ನು ಎದುರಿಸಬೇಕು ಜೊತೆಗೆ ನನ್ನಂತೆ ಕೃತಿಗಳನ್ನು ರಚಿಸಿ ಎಂದು ಸಲಹೆ ನೀಡಿದರು.
ಪ್ರವಾಸ ಮಾಡಲಾಗದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗಲಾಗಿರಲಿಲ್ಲ. ಆದರೆ ಸಾಹಿತ್ಯ ಅಕಾಡೆಮಿ ಮನೆಗೇ ಬಂದು ಪ್ರಶಸ್ತಿ ನೀಡಿದ್ದಕ್ಕೆ ಅತೀವ ಸಂತೋಷವಾಗಿದೆ ಎಂದರು.
ನನ್ನ ಮೊದಲ ಪುಸ್ತಕಕ್ಕೆ ಪ್ರಶಸ್ತಿ ಬರುತ್ತದೆ ಎಂದುಕೊಂಡಿರಲಿಲ್ಲ. ಆದರೆ ಪ್ರಶಸ್ತಿ ಬಂದಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಾಗಿದೆ ಎಂದು ಹೇಳಿದರು.
ಸುಮಿತ್ರಾಬಾಯಿ ಅವರ ಪತಿ ಲೇಖಕ ದೇವನೂರ ಮಹಾದೇವ, ಅವರ ಪುತ್ರಿ ಡಾ.ಮಿತಾ, ಅಳಿಯ ಅವಿನಾಶ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ, ಸಿಬ್ಬಂದಿ ಹರೀಶ್ ಪ್ರಕಾಶಕ ಅಭಿರುಚಿ ಗಣೇಶ್ ಹಾಜರಿದ್ದರು. ಅಕಾಡೆಮಿ ಸದಸ್ಯೆ ವೈ.ಸಿ.ಭಾನುಮತಿ ಸ್ವಾಗತಿಸಿದರು.