ಮೈಸೂರು : ಈ ಬಾರಿ ದಸರಾ ಜಂಬೂಸವಾರಿ ಸಂಜೆ 5ರಿಂದ 5.30ರೊಳಗೆ!

1 min read

ಅ. 7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ: ಸಚಿವ ಎಸ್.ಟಿ.ಸೋಮಶೇಖರ್

ಸೆ.13ರಂದು ಗಜಪಯಣಕ್ಕೆ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ 13 ರಂದು ಗಜಪಯಣಕ್ಕೆ ಹುಣಸೂರಿನ ವೀರನ ಹೊಸಹಳ್ಳಿಯಲ್ಲಿ ಚಾಲನೆ ನೀಡಲಾಗುವುದು. 8 ಆನೆಗಳು ಈ ಬಾರಿ ದಸರೆಗೆ ಬರಲಿವೆ ಎಂದು ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಅರಮನೆ ಮಂಡಳಿ ಸಭಾಂಗಣದಲ್ಲಿ ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ-2021ರ ದಸರಾ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸೆ. 16 ರಂದು ಮೈಸೂರು ಅರಮನೆಗೆ ಗಜಪಡೆ ಆಗಮಿಸಲಿದೆ. ಆನೆಗಳ ಪೋಷಣೆಗೆ 50 ಲಕ್ಷ ರೂ. ಮೀಸಲಿಡಲಾಗಿದೆ. ಅರಮನೆ ಆವರಣದಲ್ಲಿ 7 ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಅ. 7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನಡೆಯಲಿದೆ. ಉದ್ಘಾಟಕರ ಆಯ್ಕೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಬಿಡಲಾಗಿದೆ. ಅರಮನೆ ಆವರಣದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 15 ರ ಸಂಜೆ 4.36 ರಿಂದ 4.44ರ ವೇಳೆಗೆ ನಂದಿ ಪೂಜೆ, ಬಳಿಕ ಸಂಜೆ 5 ರಿಂದ 5.36ರ ವರೆಗೆ ಜಂಬೂ ಸವಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ನಗರದ ಒಳಗೆ 100 ಕಿ.ಮೀ. ವಿದ್ಯುತ್ ದೀಪಾಲಂಕಾರ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. 3 ಸ್ಥಬ್ದಚಿತ್ರಗಳಿಗೆ ಈ ಬಾರಿ ಅವಕಾಶ ನೀಡಲಾಗಿದೆ. ಅರಮನೆ ಆವರಣದಲ್ಲಿ ದಸರಾ ವೀಕ್ಷಣೆಗೆ ಎಷ್ಟು ಜನರಿಗೆ ಅವಕಾಶ ನೀಡಬೇಕು ಎಂಬುದನ್ನು ಸೆ.25ರ ಬಳಿಕ‌ ನಿರ್ಧರಿಸಲಾಗುವುದು ಎಂದರು.

ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ನೋಡಿಕೊಂಡು ಎಷ್ಟು ಜನರಿಗೆ ಅವಕಾಶ ನೀಡಬೇಕು ಎಂದು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ಅಕ್ಟೋಬರ್ 17 ರಂದು ಗಜಪಡೆಗೆ ಬೀಳ್ಕೊಡುಗೆ ಎಂದು ವಿವರಿಸಿದರು.

ಸಭೆಯಲ್ಲಿ ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೆಗೌಡ, ಕೆ.ಟಿ.ಶ್ರೀಕಂಠೇಗೌಡ, ನಿರಂಜನ್ ಕುಮಾರ್, ಎಲ್.ನಾಗೇಂದ್ರ, ಹರ್ಷವರ್ಧನ್, ಮೇಯರ್ ಸುನಂದಾ ಪಾಲನೇತ್ರ, ವಿವಿಧ ನಿಗಮ ಮಂಡಳಿ ಅಧ್ಯಕ್ಷರುಗಳಾದ ಹೆಚ್.ವಿ‌.ರಾಜೀವ್, ಫಣೀಶ್, ಅಪ್ಪಣ್ಣ, ಎ.ಹೇಮಂತ್ ಕುಮಾರ್ ಗೌಡ, ಮಹದೇವಸ್ವಾಮಿ, ಕೃಷ್ಣಪ್ಪಗೌಡ, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್.ಪಿ. ಆರ್. ಚೇತನ್, ಜಿಲ್ಲಾ ಪಂಚಾಯತ್ ಸಿ.ಇ.ಒ. ಎ.ಎಂ.ಯೋಗೀಶ್, ಡಿಸಿಎಫ್ ಕರಿಕಾಳನ್, ಎಡಿಸಿ ಡಾ. ಬಿ‌ಎಸ್. ಮಂಜುನಾಥಸ್ವಾಮಿ, ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *