ಯಡಿಯೂರಪ್ಪರನ್ನು ರಾಜಕೀಯವಾಗಿ ಹತ್ತಿಕ್ಕಲು ಐಟಿ ದಾಳಿ: ಎಂ. ಲಕ್ಷ್ಮಣ್

1 min read

ಮೈಸೂರು,ಅ.9- ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಹತ್ತಿಕ್ಕಲು ಕೇಂದ್ರ ಸರ್ಕಾರವೇ ಐಟಿ ದಾಳಿ ಮಾಡಿಸಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ದಶಕಗಳ ಕಾಲ ಬಿಜೆಪಿಯನ್ನು ಕಟ್ಟಿ ಬೆಳೆಸಿರುವ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಹತ್ತಿಕ್ಕಲು ಕೇಂದ್ರ ಸರ್ಕಾರವೇ ಐಟಿ ದಾಳಿ ಮಾಡಿಸಿದೆ. ಆ ಮೂಲಕ ವೀರಶೈವ ಲಿಂಗಾಯತರಿಗೆ ಅಪಮಾನ ಮಾಡಲಾಗಿದೆ ಎಂದರು.

ಒಂದೆಡೆ ಅದೇ ಸಮುದಾಯದ ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಿ ಮತ್ತೊಂದೆಡೆ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರನ್ನು ಮೂಲೆಗುಂಪು ಮಾಡಲು ಬಿಜೆಪಿ ಹೊರಟಿದೆ. ವೀರಶೈವ ಲಿಂಗಾಯರನ್ನು ಬಿಜೆಪಿ ಯೂಸ್ ಅಂಡ್ ಥ್ರೋ ರೀತಿ ನಡೆಸಿಕೊಳ್ಳುತ್ತಿದೆ. ಐಟಿ ದಾಳಿ ವೇಳೆ 300 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿರುವ ಬಗ್ಗೆ ಮಾಹಿತಿಯಿದೆ ಎಂದು ಹೇಳಿದರು.

ಜೆಡಿಎಸ್ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನ್ನು ಸೋಲಿಸುವ ಏಕೈಕ ಉದ್ದೇಶದಿಂದ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ ಮಂಡ್ಯ, ಮೈಸೂರು ಭಾಗದಲ್ಲೇಕೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರ್ ಎಸ್ಎಸ್ ಅನ್ನು ಟೀಕಿಸುತ್ತಿರುವುದು ಅವರ ಹೃದಯದಿಂದ ಬಂದಿದ್ದರೆ ನಾವು ಸ್ವಾಗತಿಸುತ್ತೇವೆ. ಆದರೆ ಇದು ಉಪ ಚುನಾವಣೆವರೆಗೆ ಮಾತ್ರ ಇರುತ್ತದೆ. ಜೆಡಿಎಸ್ ಮಾಡಿದ ತಪ್ಪಿನಿಂದ ರಾಜ್ಯದಲ್ಲಿ ಬಿಜೆಪಿ ಬಲವರ್ಧನೆ ಆಯಿತು ಎಂದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೇ ಇರುವುದನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡು ಅಧಿಕಾರಕ್ಕೆ ಬಂತು. ಜೆಡಿಎಸ್ ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡಿದೆ ಎಂದು ಹೇಳಿಕೊಂಡು ಬಿಜೆಪಿ ದೊಡ್ಡಮಟ್ಟದಲ್ಲಿ ಬೆಳೆದಿದೆ. ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ಹಾಕಿದರೆ ಯಾವುದೇ ಪ್ರಯೋಜನವಿಲ್ಲ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಮಂಜುಳ ಮಾನಸ, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡ ಚಂದ್ರಶೇಖರ್ ಇತರರು ಇದ್ದರು.

About Author

Leave a Reply

Your email address will not be published. Required fields are marked *