ಅಂತರ ರಾಜ್ಯ ಜಲವಿವಾದ ವಿಚಾರ: ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷಗಳ ಸಭೆ

1 min read

ಬೆಂಗಳೂರು,ಜ.23-ಫೆಬ್ರವರಿ ಮೊದಲ ವಾರದಲ್ಲಿ ಅಂತರ ರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆ ನಡೆಯಲಿದೆ.
ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಅಂತರ ರಾಜ್ಯ ಜಲವಿವಾದಗಳ ಕುರಿತು ನಡೆದ ಸಚಿವರ, ಕಾನೂನು ತಜ್ಞ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕಾನೂನು ವಿಭಾಗದ ಎಲ್ಲಾ ಹಿರಿಯ ವಕೀಲರೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಈ ವಿಚಾರವನ್ನು ತಿಳಿಸಿದ್ದಾರೆ.
ವಕೀಲರು, ಸಚಿವರು, ಕಾನೂನು ಸಚಿವರನ್ನೂ ಕರೆದು, ಕಾನೂನಿನ ಹೋರಾಟ ಎಲ್ಲಿಯವರೆಗೂ ಬಂದಿದೆ, ನಾವೆಲ್ಲರೂ ಮುಂದೆ ಯಾವ ನಿಲುವನ್ನು ತೆಗೆದುಕೊಂಡು ರಾಜ್ಯದ ಹಿತದೃಷ್ಟಿಯಿಂದ ಯೋಜನೆಗಳನ್ನು ಸಾಕಾರಗೊಳಿಸಲು ಯಾವ ರೀತಿ ಮುಂದುವರೆಯಬೇಕೆಂದು ಚರ್ಚಿಸಲಾಗುವುದು. ಕೆಲವು ಪ್ರಕರಣಗಳು ಪ್ರಮುಖ ಘಟ್ಟದಲ್ಲಿರುವುದರಿಂದ ಮತ್ತೊಮ್ಮೆ ಕಾನೂನು ಪರಿಣಿತರು ಹಾಗೂ ವಿರೋಧ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ಮಾಡಿ ನಮ್ಮ ನಿಲುವಿನ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಕೃಷ್ಣಾ, ಕಾವೇರಿ ಜಲಾನಯನ ಪ್ರದೇಶಗಳು ಮತ್ತು ಮಹಾದಾಯಿ ಯೋಜನೆಗಳ ಬಗ್ಗೆ ಹಾಗೂ ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿರುವ ಪ್ರಕರಣಗಳ ಬಗ್ಗೆ ಚರ್ಚೆಯಾಗಿದೆ. ವಕೀಲರು ಸಹ ಹಲವಾರು ನ್ಯಾಯಾಲಯಗಳ ಪ್ರಕರಣಗಳ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಈ ಎಲ್ಲಾ ಜಲವಿವಾದಗಳ ಬಗ್ಗೆ ಜನವರಿ ಅಂತ್ಯದಲ್ಲಿ ಮತ್ತೊಂದು ವೀಡಿಯೋ ಸಂವಾದ ನಡೆಸಲಾಗುವುದು ಎಂದು ತಿಳಿಸಿದರು.
ಮೇಕೆದಾಟು ಯೋಜನೆಗೆ ಪರ್ಯಾಯವಾಗಿ ತಮಿಳುನಾಡು ಹೊಗೆನಕಲ್ 2ನೇ ಯೋಜನೆ ಜಾರಿಗೆ ತರುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಹಲವಾರು ಸವಾಲುಗಳನ್ನು ಹಿಂದೆ ಕೂಡ ಎದುರಿಸಲಾಗಿದ್ದು, ಹೊಗೆನಕಲ್ 2ನೇ ಯೋಜನೆಯಾಗಲಿ ಅಥವಾ ನದಿ ಜೋಡಣೆಯ ಯೋಜನೆಯಾಗಲಿ ಈಗಾಗಲೇ ಕರ್ನಾಟಕ ಸರ್ವೋಚ್ಛ ನ್ಯಾಯಾಲಯದಲ್ಲಿ ವಿರೋಧ ವ್ಯಕ್ತಪಡಿಸಿ ದಾವೆ ಹೂಡಲಾಗಿದೆ. ಹೊಗೆನಕಲ್ ಯೋಜನೆಗೂ ಕೇಂದ್ರ ಜಲ ಆಯೋಗವು ಇದಕ್ಕೆ ಒಪ್ಪಿಗೆ ನೀಡಬಾರದು ಎಂದು ಮನವಿ ಮಾಡಲಾಗಿದೆ ಹಾಗೂ ಕಾನೂನಾತ್ಮಕ ಹೋರಾಟವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

About Author

Leave a Reply

Your email address will not be published. Required fields are marked *