ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಆರ್ಭಟ

1 min read

ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿಯೂ ಸಹ ಮಳೆ ಆರ್ಭಟ ಮುಂದುವರಿದಿದ್ದು, ತಂಬಾಕು ಹದ ಮಾಡುವ ಬ್ಯಾರನ್ ಗಳು ವಾಸದ ಮನೆ ಕುಸಿದು ಬಿದ್ದಿದೆ. ತಂಬಾಕು ಹಾಗೂ ಶುಂಠಿ ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ಬೆಳೆಗಳು ಕೊಳೆಯುವ ಭೀತಿ ಎದುರಾಗಿದೆ.

ಸೋಮವಾರ ರಾತ್ರಿ ಬಿದ್ದ ಭಾರಿ ಮಳೆಗೆ ಹನಗೋಡು ಹೋಬಳಿಯ ಹರೀನಹಳ್ಳಿಯ ರುದ್ರಾರಾಧ್ಯರ ಪತ್ನಿ ಲಲಿತಮ್ಮ ಎಂಬುವವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಕಟ್ಟಡದ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಅರಸುಕಲ್ಲಹಳ್ಳಿಯ ಕುಮಾ‌ರ್ ಅವರಿಗೆ ಸೇರಿದ ವಾಸದ ಮನೆ ಬಿದ್ದು ಹಾನಿಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿ ಯಾಗಿರುವುದಿಲ್ಲ.

ಬಿರುಗಾಳಿಗೆ ಹಾರಿ ಹೋದ ಮೇಲ್ಚಾವಣಿ: ಚಿಲ್ಕುಂದದಲ್ಲಿ ಸೋಮವಾರ ರಾತ್ರಿ ಬೀಸಿದ ಬಿರುಗಾಳಿಗೆ ರಾಮಶೆಟ್ಟರ ಮನೆ ಚಾವಣಿ ಹಾಗೂ ಚಂದ್ರು ಅವರ ಕೊಟ್ಟಿಗೆಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿ ಹೋಗಿದ್ದು, ಮನೆಯೊಳಗಿದ್ದ ದವಸ, ಧಾನ್ಯ, ಬಟ್ಟೆ, ಮತ್ತಿತರ ಪದಾರ್ಥಗಳು ಮಳೆನೀರಿನಲ್ಲಿ ತೋಯ್ದು ಹಾಳಾಗಿವೆ. ಬಿ.ಆರ್ ಕಾವಲ್ ಬೋವಿ ಕಾಲೋನಿಯ ಮಾದೇವ ಬೋವಿ, ಕೂಡ್ಲೂರಿನ ಅಲ್ಪೋನ್ಸ್ ಮೇರಿ, ಅತ್ತಿಗುಪ್ಪೆಯ ರಂಗಯ್ಯ ರವರ ವಾಸದ ಮನೆಗಳ ಸಹ ಮಳೆಯಿಂದ ಹಾನಿಯಾಗಿವೆ.

ಜೋಳದ ಬಿತ್ತನೆ ನಾಶ: ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳೇನಹಳ್ಳಿಯ ತಗ್ಗುಪ್ರದೇಶದ ಜಮೀನುಗಳಲ್ಲಿ ಅಪಾರ ಪ್ರಮಾಣದ ಮಳೆ ನೀರು ನಿಂತಿದ್ದು, ಎರಡು ದಿನಗಳ ಹಿಂದಷ್ಟೇ ಬಿತ್ತನೆ ಮಾಡಿದ್ದ ನಟೇಶ್, ಶ್ರೀನಿವಾಸ, ಆನಂದ, ಕಲೀಂ ಮತ್ತಿತರ ರೈತರಿಗೆ ಸೇರಿದ ಮುಸುಕಿನ ಜೋಳ ಹಾಗೂ ರಸಗೊಬ್ಬರ ಸಹಿತ ನೀರುಪಾಲಾಗಿದೆ.

ಕೋಡಿ ಒಡೆದ ನಾಗಮಂಗಲ ಕೆಂಪಿ ಕೆರೆ. : ನಾಗಮಂಗಲ ಗ್ರಾಮದ ಕೆಂಪಿ ಕೆರೆ ತುಂಬಿ ಕೋಡಿ ಒಡೆದು ಹೋಗಿ ಅಪಾರ ಪ್ರಮಾಣದ ನೀರು ಜಮೀನುಗಳಲ್ಲಿ ಹರಿದು ಬೆಳೆ ನಾಶವಾಗಿದೆ. ಅಲ್ಲದ ಅತ್ತಿಕುಪ್ಪೆ ಕೆರೆಯ ಕೋಡಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಜಮೀನಿನ ಮೇಲೆ ಹರಿದಿದೆ. ಕೆರೆ ಕೆಳ ಭಾಗದ ಅಡಕೆ, ತೆಂಗಿನತೋಟ, ಶುಂಠಿ, ತಂಬಾಕು ಜಮೀನು ಜಲಾವೃತವಾಗಿದ್ದು, ಕಣ್ಣು ಹಾಯಿಸಿದೆಲ್ಲೆಡೆ ಜಮೀನು ಕೆರೆಗಳಂತೆ ಗೋಚರಿಸುತ್ತಿವೆ.

ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ; ಹನಗೋಡು ನಾಡಕಚೇರಿಯ ರಾಜಸ್ವ ನಿರೀಕ್ಷಕ ಪ್ರಶಾಂತರಾಜೇಅರಸ್, ಗ್ರಾಮ ಆಡಳಿತಾಧಿ ಕಾರಿಗಳಾದ ಸುಮಂತ್, ಸುನಿಲ್ ಅಂತೋಣಿರಾಜ್, ಮಲ್ಲೇಶ್, ಶಿವಕುಮಾರ್ ಅವರು ಅತ್ತಿಕುಪ್ಪೆಯ ಕೆರೆ ಕೋಡಿ ಒಡೆದು ಹಾನಿಗೊಳಗಾಗಿರುವ ಪ್ರದೇಶ ಹಾಗೂ ಕಲ್ಲಹಳ್ಳಿ, ತಟ್ಟೆಕೆರೆ, ಹೊಸಕೋಟೆ, ಕಚುವಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ, ಮನೆ, ಬ್ಯಾರನ್ ಹಾನಿ ಪರಿಶೀಲಿಸಿದರು.

About Author

Leave a Reply

Your email address will not be published. Required fields are marked *