ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿ ಹೃದಯಾಘಾತದಿಂದ ಸಾವು
1 min readಮೈಸೂರು,ಜ.12-ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ರಶ್ಮಿ(21) ಮೃತಪಟ್ಟಿರುವ ಯುವತಿ. ನಿನ್ನೆ ಹುಣಸೂರು ತಾಲೂಕಿನ ಸೋಮನಹಳ್ಳಿ ಗೇಟ್ ಬಳಿ ನಡೆದ ಅಪಘಾತದಲ್ಲಿ ಅಣ್ಣ ಕೀರ್ತಿ (28) ಮೃತಪಟ್ಟಿದ್ದರು. ಇಂದು ಅಂತ್ಯಸಂಸ್ಕಾರಕ್ಕೆ ಬಂದಿದ್ದ ದೊಡ್ಡಪ್ಪನ ಮಗಳು ರಶ್ಮಿ ಅಣ್ಣನ ಮೃತದೇಹ ನೋಡಿ ಆಘಾತಕ್ಕೆ ಒಳಗಾಗಿ ರಶ್ಮಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ.
ತಕ್ಷಣ ಆಕೆಯನ್ನು ಹುಣಸೂರು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕೀರ್ತಿ ಸ್ಥಳದಲ್ಲೇ ಮೃತಪಟ್ಟಿದ್ದ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದವು.