ಕಾಂಗ್ರೆಸ್‌ ಪಕ್ಷಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರ ಸವಾಲು

1 min read

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಮೂಲಕ ಆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡುತ್ತದೆ ಎಂದು ಕಾಂಗ್ರೆಸ್ಸಿಗರು ನನಗೆ ಗ್ಯಾರಂಟಿ ಕೊಟ್ಟರೆ ನಾನು ಕೂಡ ಎಲ್ಲರಿಗಿಂತ ಮೊದಲೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ʼಜನತಾ ಜಲಧಾರೆʼ ಕಾರ್ಯಕ್ರಮದಲ್ಲಿ ರಾಜ್ಯವ್ಯಾಪಿ ಜಲ ಸಂಗ್ರಹಕ್ಕೆ ತೆರಳಲಿರುವ ʼಗಂಗಾ ರಥಯಾತ್ರೆʼಗೆ ಸಿದ್ಧಪಡಿಸಲಾಗಿದ್ದ ವಾಹನವನ್ನು ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷದ್ದು ಪಾದಯಾತ್ರೆ ಅಲ್ಲ, ಅದು ಮತಯಾತ್ರೆ ಮಾತ್ರ. ಕೇವಲ ಮುಂದಿನ ಚುನಾವಣೆಯಲ್ಲಿ ಮತ ಪಡೆಯುವ ಏಕೈಕ ಉದ್ದೇಶದಿಂದ ಆ ಪಕ್ಷ ಜನರಿಗೆ ಪಾದಯಾತ್ರೆ ಹೆಸರಿನಲ್ಲಿ ಮಂಕುಬೂದಿ ಎರಚುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

ಆ ಪಕ್ಷದ ಪ್ರತಿಪಕ್ಷ ನಾಯಕರು ಮೇಕೆದಾಟು ಯೋಜನೆ ಬಗ್ಗೆ ದಿನಕ್ಕೆ ಒಂದೊಂದು ಹಸಿಸುಳ್ಳು ಹೇಳುತ್ತಿತ್ತಾರೆ. ಇನ್ನು, ಆ ಪಕ್ಷದ ರಾಜ್ಯಾಧ್ಯಕ್ಷರು ಪ್ರಾಣ ಹೋದರೂ ಪಾದಯಾತ್ರೆ ನಿಲ್ಲಲ್ಲ ಅಂತಾರೆ. ಪಾಪ.. ನಿಮ್ಮ ಪ್ರಾಣ ಯಾಕೆ ವ್ಯರ್ಥ ಮಾಡಿಕೊಳ್ತೀರಾ? ನೀವು ಕಾವೇರಿ ಕೊಳ್ಳದ ಜನರ ಬಾವನೆಗಳ ಜತೆ ಚೆಲ್ಲಾಟ ಆಡಿಕೊಂಡು ಅವರ ಜೀವ ತೆಗೆಯಲು ಹೊರಟಿದ್ದಾರಾ. ಅಂಥ ಕೆಲಸ ಬೇಡ ಎಂದು ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್‌ ನಾಯಕರಿಗೆ ಚಾಟಿ ಬೀಸಿದರು.

ಇಲ್ಲಿ ಮೇಕೆದಾಟು, ತಮಿಳುನಾಡಿನಲ್ಲಿ ಡಿಎಂಕೆ ಸಖ್ಯ!

ಕರ್ನಾಟಕದಲ್ಲಿ ಕಾಂಗ್ರೆಸ್‌ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡುತ್ತಿದೆ. ಆದರೆ, ಪಕ್ಕದ ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆಯನ್ನು ವಿರೋಧ ಮಾಡುತ್ತಿರುವ ಡಿಎಂಕೆ ಪಕ್ಷದ ಮಿತ್ರಪಕ್ಷವಾಗಿದೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ರಾಜ್ಯಪಾಲರಿಂದ ಭಾಷಣ ಮಾಡಿಸಿರುವ ಸ್ಟಾಲಿನ್‌ ಸರಕಾರದ ಜತೆ ಕಾಂಗ್ರೆಸ್‌ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬಹದಲ್ಲ. ಅದನ್ನು ಬಿಟ್ಟು ಪಾದಯಾತ್ರೆ ಮೂಲಕ ನಾಟಕ ಮಾಡುವುದು ಏಕೆ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನೆ ಮಾಡಿದರು.

ದೇವೇಗೌಡರ ಮೇಲೆ ನಂಬಿಕೆ ಇದ್ದರೆ ಪಾದಯಾತ್ರೆ ಯಾಕೆ?

ದೇವೇಗೌಡರು ಮಾಡಿದ ಪ್ರಯತ್ನದ ಫಲವಾಗಿ ಇಂದು ಬೆಂಗಳೂರು ಜನರಿಗೆ ಕಾವೇರಿ ನಾಲ್ಕನೆ ಹಂತದಲ್ಲಿ 9 ಟಿಎಂಸಿ ನೀರು ಸಿಕ್ಕಿದೆ. ದೇವೇಗೌಡರು ಪ್ರಧಾನಿಗಳ ಜತೆ ವಿಶ್ವಾಸ ಇಟ್ಟುಕೊಂಡಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಷ್ಟು ನಂಬಿಕೆ ಇದ್ದ ಮೇಲೆ ದೇವೇಗೌಡರನ್ನೇ ಪ್ರಧಾನಿ ಜತೆ ಮಾತನಾಡಿ ಎಂದು ಕಾಂಗ್ರೆಸ್‌ ನಾಯಕರು ಹೇಳಬಹುದಲ್ಲವೆ? ಹಾಗಿದ್ದ ಮೇಲೆ ಪಾದಯಾತ್ರೆ ಏತಕ್ಕೆ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಕರ್ನಾಟಕದ ನೀರಿನ ವಿಚಾರದಲ್ಲಿ ದೇವೇಗೌಡರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ, 1962ರಲ್ಲಿ ಪಕ್ಷೇತರ ಶಾಸಕರಾಗಿ ಗೆದ್ದು ಶಾಸನಸಭೆಗೆ ಬಂದ ಅವರು ನಡೆಸಿದ ಹೋರಾಟದ ಫಲವೇ ಹಾರಂಗಿ, ಕಬಿನಿ, ಹೇಮಾವತಿ ಯೋಜನೆಗಳು. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾನೂನಾತ್ಮಕ, ಆಡಳಿತ ಹಾಗೂ ತಾಂತ್ರಿಕವಾಗಿ ಅಪಾರ ಜ್ಞಾನವುಳ್ಳ ದೇವೇಗೌಡರು ಮಾಡಿರುವ ಕೆಲಸಗಳ ಬಗ್ಗೆ ಸಿದ್ದರಾಮಯ್ಯ ಅವರಿಗೇನು ಗೊತ್ತು? ಒಂದು ವೇಳೆ ನೀರಾವರಿ ವಿಷಯಗಳಲ್ಲಿ ದೇವೇಗೌಡರನ್ನು ಕಡೆಗಣಿಸಿದರೆ ರಾಜ್ಯಕ್ಕೇ ನಷ್ಟ ಎಂದು ಮಾಜಿ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದರು.

ಮಾತೆತ್ತಿದರೆ ಕುಮಾರಣ್ಣ, ನಮ್ಮಣ್ಣ ಅನ್ನತ್ತಾರೆ. ಅವರು ಹೊಡೆದರೆ ಹೊಡೆಸಿಕೊಳ್ತೀನಿ ಎನ್ನುತ್ತಾರೆ. ಅಶೋಕಣ್ಣ, ಅಶ್ವತ್ಥನಾರಾಯಣ ಅಣ್ಣ ಅಂತ ಮಾತನಾಡುತ್ತಾರೆ. ನೀರಾವರಿ ವಿಷಯದಲ್ಲಿ ಇಂಥ ಡ್ರಾಮಾ ಎಲ್ಲಾ ಯಾಕೆ ಎಂದು ಡಿಕೆಶಿಗೆ ಕುಮಾರಸ್ವಾಮಿ ಅವರು ನೇರವಾಗಿ ಟಾಂಗ್ ಕೊಟ್ಟರು.

DPR ಬಗ್ಗೆ ಸಿದ್ದರಾಮಯ್ಯ ಹಸಿಸುಳ್ಳು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರಕಾರ ಇದ್ದಾಗಲೇ DPR ಮಾಡಿ ಸಲ್ಲಿಕೆ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರು 2017ರಲ್ಲಿ ಬೆಂಗಳೂರಿನಲ್ಲಿರುವ ಕೇಂದ್ರ ಜಲ ಆಯೋಗದ ಪ್ರಾದೇಶಿಕ ಕಚೇರಿಗೆ ಸಲ್ಲಿಕೆ ಮಾಡಿದ್ದು ಕೇವಲ ಯೋಜನೆ PFR (ಪ್ರೈಮರಿ ಫೀಸಬಲ್‌ ರಿಪೋರ್ಟ್) ಮಾತ್ರ.‌ ಅದು ಅಲ್ಲಿಗೇ ನಿಂತಿತು. 2018ರಲ್ಲಿ ನಾನು ಸಿಎಂ ಆದ ಕೂಡಲೇ ಇನ್ನೊಮ್ಮೆ PFR ಸಲ್ಲಿಸಿ DPR ಸಿದ್ಧಪಡಿಸಲು ಅನುಮೋದನೆ ಪಡೆದುಕೊಳ್ಳಲಾಯಿತು. ಅದರ ಬೆನ್ನಲ್ಲೇ ಆಗ ಕೇಂದ್ರದ ಭೂ ಸಾರಿಗೆ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಅವರು ಕೂಡಲೇ DPR ಸಲ್ಲಿಸಿ ಎಂದರು. ಹಲವು ಬಾರಿ ನಾನು ಗಡ್ಕರಿ ಅವರನ್ನು ಭೇಟಿ ಮಾಡಿದ್ದೆ. ನಾನು ಅಧಿಕಾರದಲ್ಲಿದ್ದ 14 ತಿಂಗಳಲ್ಲಿ 11 ಸಭೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

123 ಸೀಟು ಗೆಲ್ಲಲಿಕ್ಕೆ ಈ ಕಾರ್ಯಕ್ರಮ:

ನಾನು ಯಾವುದನ್ನು ಮುಚ್ಚುಮರೆ ಮಾಡುತ್ತಿಲ್ಲ. ನಮಗೆ ಐದು ವರ್ಷಗಳ ಸ್ವತಂತ್ರ ಸರಕಾರ ಕೊಡಿ ಎಂದು ಜನರನ್ನು ನೇರವಾಗಿಯೇ ಕೇಳುತ್ತಿದ್ದೇನೆ. 123 ಸೀಟು ಗೆಲ್ಲಿಸಿಕೊಡಿ ಎಂದು ಮನವಿ ಮಾಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಪೂರ್ಣ ಪ್ರಮಾಣದ ಸರಕಾರ ಸಿಕ್ಕಿದರೆ ನಾವು ಮಾತು ಕೊಟ್ಟಂತೆ ಎಲ್ಲ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಷಡ್ಯಂತ್ರ ಮಾಡುವ ನೀಚ ಕೆಲಸ ಮಾಡಲ್ಲ

ತಮ್ಮ ವಿರುದ್ಧ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಷಡ್ಯಂತ್ರ ಮಾಡಿದ್ದಾರೆಂದು ಡಿ.ಕೆ.ಶಿವಕುಮಾರ್‌ ಆರೋಪ ಮಾಡಿದ್ದಾರಲ್ಲ ಎನ್ನುವ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಇನ್ನೊಬ್ಬರ ವಿರುದ್ಧ ಷಡ್ಯಂತ್ರ ಮಾಡುವಂತಹ ನೀಚ ಕೆಲಸವನ್ನು ನಮ್ಮ ಕುಟುಂಬ ಎಂದಿಗೂ ಮಾಡಿಲ್ಲ, ಮಾಡುವುದೂ ಇಲ್ಲ. ದೇವೇಗೌಡರ ಪುಸ್ತಕ ಬಿಡುಗಡೆಗೆ ಅಂತ ನಾನು ದೆಹಲಿಗೆ ಹೋಗಿದ್ದೆ. ಮರುದಿನವೇ ನನ್ನ ಹುಟ್ಟುಹಬ್ಬ ಇತ್ತು. ಬೆಂಗಳೂರಿನಲ್ಲಿ ಜನ ಮನೆ ಬಳಿ ಬರುತ್ತಾರೆ, ಕೋವಿಡ್ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಹುಟ್ಟಿದ ಹಬ್ಬ ಆಚರಣೆ ಬೇಡ ಎಂದು ನಿರ್ಧಾರ ಮಾಡಿದ್ದೆ. ಹೀಗಾಗಿ ದೆಹಲಿಯಲ್ಲಿ ನಾಲ್ಕೈದು ದಿನ ಇದ್ದೆ.

ಅಷ್ಟಕ್ಜೇ ನಾನು ದೆಹಲಿಯಲ್ಲಿ ಕುಳಿತು ಏನೋ ಷಡ್ಯಂತ್ರ ಮಾಡ್ತಾ ಇದೀನಿ ಅಂತಾ ಹೇಳಿದರು ಎಂದರು ಅವರು.

ಸುಮ್ಮನೇ ಜೈಲಿಗೆ ಕಳಿಸೋಕೆ ಆಗುತ್ತದೆಯೇ ತಪ್ಪು ಮಾಡಿದರೆ ತಾನೇ ಜೈಲಿಗೆ ಕಳಿಸೋಕೆ ಆಗುವುದು ಎಂದರಲ್ಲದೆ, ಇಂಥ ವೃಥಾ ಆರೋಪಗಳನ್ನು ಮಾಡಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಭ್ರಷ್ಟಾಚಾರ ಆಗಿಲ್ಲವೆ? ಅವರು ಭ್ರಷ್ಟಾಚಾರ ಮಾಡಿಲ್ಲವೆ? ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ನಗರದ ಅದೆಷ್ಟು ಕೆರೆಗಳನ್ನು ಅವರ ಸುತ್ತಮುತ್ತಲಿನವರು ನುಂಗಿದರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಕುಮಾರಸ್ವಾಮಿ ಅವರು ತೀವ್ರ ಪ್ರಹಾರ ನಡೆಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್‌, ಸಾ.ರಾ.ಮಹೇಶ್‌, ಶಾಸಕರಾದ ದಾಸರಹಳ್ಳಿ ಮಂಜಣ್ಣ, ಮಾಗಡಿ ಮಂಜುನಾಥ್‌, ವಿ.ಆರ್.ನಾಡಗೌಡರು, ಮುಖಂಡರಾದ ಟಿ.ಎ.ಸರವಣ, ನಬಿ, ಕಲ್ಪನಾ ಸಿದ್ದರಾಜು, ವಿಧಾನ ಪರಿಷತ್‌ ಸದಸ್ಯ ಗೋವಿಂದ ರಾಜು, ಜೆಡಿಎಸ್‌ ನಗರ ಅಧ್ಯಕ್ಷ ಆರ್.ಪ್ರಕಾಶ್‌, ಸಿದ್ದು ಬಂಡಿ, ಕರೆಮ್ಮ ಜಿ. ನಾಯಕ ಮುಂತಾದವರು ಹಾಜರಿದ್ದರು.

About Author

Leave a Reply

Your email address will not be published. Required fields are marked *