ಕೋವಿಡ್ 3ನೇ ಅಲೆ ಎದುರಿಸಲು ಸರ್ಕಾರ ಸಿದ್ಧ: ಸಚಿವ ಡಾ.ಕೆ.ಸುಧಾಕರ್
1 min readಬೆಂಗಳೂರು,ಜ.17-ರಾಜ್ಯ ಸರ್ಕಾರ ಕೋವಿಡ್ 3ನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 10 ಸಾವಿರ ಗೃಹ ವೈದ್ಯರ ಜೊತೆ ವೀಡಿಯೊ ಕಾನ್ಫರೆನ್ಸ್ ಮಾಡಿ, ಹೋಮ್ ಐಸೋಲೇಷನ್ ನಲ್ಲಿದ್ದಾಗ ಯಾವ ರೀತಿ ಆರೈಕೆ ಮಾಡಬೇಕು, ಟೆಲಿ ಟ್ರಯಾಜಿಂಕ್ ಹೇಗೆ ಮಾಡಬೇಕು, ಅವರಿಗೆ ನೀಡಬೇಕಾಗಿರುವ ಸಲಹೆ, ಸೂಚನೆಗಳೇನು ಎಂದು ವಿವರಿಸಲಾಗಿದೆ. ಕೆಲವೇ ದಿನಗಳಲ್ಲಿ ಅಂತಿಮ ವರ್ಷದ ವೈದ್ಯಕೀಯ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಸೇರಿಕೊಳ್ಳಲಿದ್ದಾರೆ ಎಂದಿದ್ದಾರೆ.
ಎಷ್ಟೇ ಜನರಿಗೆ ಸೋಂಕು ತಗುಲಿದರೂ ಮನೆಯಲ್ಲೇ ಪರಿಣಾಮಕಾರಿ ಚಿಕಿತ್ಸೆ ಸಿಗುವ ಹಾಗೆ, ತಂತ್ರಜ್ಞಾನ ಹಾಗೂ ದತ್ತಾಂಶಗಳನ್ನು ಉಪಯೋಗ ಮಾಡಿಕೊಂಡು ವಿನೂತನವಾಗಿ 3ನೇ ಅಲೆಯನ್ನು ನಿಯಂತ್ರಣ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ಲಸಿಕಾಕರಣ ಭಾರತ ವಿಶ್ವಕ್ಕೆ ಮಾದರಿ:
ಕೋವಿಡ್ ಲಸಿಕಾಕರಣದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗುವಂತೆ ಸಾಧನೆ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಒಂದು ವರ್ಷವಾಗಿದೆ. ಭಾರತ 156 ಕೋಟಿ ಡೋಸ್ ಲಸಿಕೆಗಳನ್ನು ನೀಡಿ, ಐತಿಹಾಸಿಕ ಸಾಧನೆ ಮಾಡಿದೆ. ಭಾರತೀಯನಾಗಿ, ಕರ್ನಾಟಕದ ಜನತೆಯ ಪರವಾಗಿ ಪ್ರಧಾನಿಗಳಿಗೆ ಅಭಿನಂದನೆಗಳು ಹಾಗೂ ಲಸಿಕೆಯನ್ನು ಕಂಡು ಹಿಡಿದ ವಿಜ್ಞಾನಿಗಳಿಗೆ ಹಾಗೂ ಸಂಸ್ಥೆಗಳಿಗೂ ಕೃತಜ್ಞತೆಗಳು ಎಂದು ಹೇಳಿದರು.
ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿಯ ಕೊಡುಗೆಯೂ ಇದೆ. ಮುಂಚೂಣಿ ಕಾರ್ಯಕರ್ತರು ಮತ್ತು ಅಧಿಕಾರಿಗಳು ಕೂಡ ಈ ಲಸಿಕಾಕರಣದ ಯಶಸ್ಸಿನ ಭಾಗವಾಗಿದ್ದಾರೆ. ಜನರು ಲಸಿಕೆ ಪಡೆದುಕೊಂಡು ಸರ್ಕಾರದ ಹೋರಾಟದ ಜೊತೆ ಕೈ ಜೋಡಿಸಿದ್ದಾರೆ ಎಂದು ಹೇಳಿದರು.
36 ದೇಶಗಳಲ್ಲಿ ಇನ್ನೂ ಶೇ. 10 ರಷ್ಟು ಲಸಿಕೆ ನೀಡಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಶೇ. 99 ರಷ್ಟು ಜನರು ಮೊದಲ ಡೋಸ್ ತೆಗೆದುಕೊಂಡಿದ್ದರೆ, ಶೇ.83 ರಷ್ಟು ಜನರು ಎರಡೂ ಡೋಸ್ ತೆಗೆದುಕೊಂಡಿದ್ದಾರೆ. ಪ್ರಧಾನಿಗಳು ನಮ್ಮ ದೇಶಕ್ಕೆ ಮಾತ್ರವಲ್ಲ, ವಿಶ್ವದ ಬಡ ರಾಷ್ಟ್ರಗಳಿಗೂ ಲಸಿಕೆ ಸರಬರಾಜು ಮಾಡಿ, ಕೊರೊನಾ ಹೋರಾಟದಲ್ಲಿ ಭಾರತ ದೊಡ್ಡಣ್ಣನ ಪಾತ್ರ ನಿರ್ವಹಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.