ಪೆಟ್ರೋಲ್, ಡೀಸೆಲ್ ನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಲು ಸರ್ಕಾರದ ವಿರೋಧ: ಖಂಡಿಸಿ, ಪ್ರತಿಭಟನೆ
1 min readಮೈಸೂರು,ಸೆ.21:- ಪೆಟ್ರೋಲ್, ಡೀಸೆಲ್ ನ್ನು ಜಿಎಸ್ ಟಿ ವ್ಯಾಪ್ತಿಗೆ ಸೇರಿಸಲು ವಿರೋಧಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿರುವುದು ಜನರ ದೈನಂದಿನ ಬದುಕಿನ ಬಹುತೇಕ ವೆಚ್ಚಗಳು ಹೆಚ್ಚಾಗಲು ಮುಖ್ಯ ಕಾರಣ. ದಿನನಿತ್ಯದ ವೆಚ್ಚಗಳು ಏರುಗತಿಯಲ್ಲಿ ಇದ್ದರೆ ದೇಶದ ಜನರ ಬದುಕು ದುರ್ಬರವಾಗಲಿದೆ. ಕೇಂದ್ರ ಸರ್ಕಾರ ತೈಲದ ಸುಂಕವನ್ನು ತಗ್ಗಿಸಿದರೆ, ರಾಜ್ಯ ಸುಂಕ ಹೆಚ್ಚಿಸಿ ಬೆಲೆಯು ಮಾರುಕಟ್ಟೆಯಲ್ಲಿ ಕಡಿಮೆ ಆಗದಂತೆ ಮಾಡಿ ರಾಜ್ಯ ಸರ್ಕಾರದ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಪೆಟ್ರೋಲ್, ಡೀಸೆಲ್ ದೇಶದ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು ಅದನ್ನು ಜಿಎಸ್ ಟಿ ವ್ಯಾಪ್ತಿಗೆ ತಂದಲ್ಲಿ ದೇಶದ ಬಡ ಜನರಿಗೆ ನಿಜವಾದ ಅಚ್ಛೇ ದಿನಗಳು ಬಂದಂತಾಗಲಿದೆ ಎಂದರು.ಪೆಟ್ರೋಲ್-ಡೀಸೆಲ್ ಬೆಲೆಯನ್ನು ಇಳಿಸಲು ಕೇಂದ್ರ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.