ವೀಕೆಂಡ್ ಕರ್ಪ್ಯೂ ಆದೇಶ ಹಿಂಪಡೆಯುವಂತೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯ
1 min readಮೈಸೂರು,ಜ.12- ವೀಕೆಂಡ್ ಕರ್ಪ್ಯೂ ಹಾಗೂ ಶೇ.50 ರಷ್ಟು ವ್ಯಾಪಾರ ವಹಿವಾಟು ಆದೇಶ ವಾಪಸ್ ಪಡೆಯಲು ರಾಜ್ಯ ಸರ್ಕಾರವನ್ನು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ.
ಇಂದು ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ನಾವು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದೇವೆ. ತೆರಿಗೆ, ಕಂದಾಯ ಎಲ್ಲಾವನ್ನೂ ಕಾಲಕಾಲಕ್ಕೆ ಸಂಪೂರ್ಣ ಸಂದಾಯ ಮಾಡುತ್ತಿದ್ದೇವೆ. ಆದರೆ ಶೇ.50 ರಷ್ಟು ಗ್ರಾಹಕರನ್ನ ಇಟ್ಟುಕೊಂಟು ವ್ಯಾಪಾರ ಮಾಡಲು ಸಾಧ್ಯವಿಲ್ಲ. ವೀಕೆಂಡ್ ನಲ್ಲಿ ನಮ್ಮ ವ್ಯಾಪಾರ ವಹಿವಾಟು ಹೆಚ್ಚಾಗಿರುತ್ತದೆ. ಈ ವೇಳೆಯಲ್ಲಿ ಕರ್ಪ್ಯೂ ವಿಧಿಸಿದ್ರೆ ನಮಗೆ ನಷ್ಟವಾಗುತ್ತದೆ. ರಾಜಕೀಯ ರ್ಯಾಲಿಗಳಿಗೆ ಇಲ್ಲದ ನಿರ್ಬಂಧ ನಮಗೇಕೆ ಎಂದು ಪ್ರಶ್ನಿಸಿದ್ದಾರೆ.
ರಾಜಕಾರಣಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಜನರಿಗೆ ಒಂದು ಕಾನೂನು ಮಾಡಿ, ಜನನಾಯಕರಿಗೆ ಒಂದು ಕಾನೂನು ಮಾಡಿಕೊಳ್ಳಿ. ಆಗ ನಾವೇ ಬೇರೆ ಅಂತಾ ಸುಮ್ಮನೆ ಕಾನೂನು ಪಾಲನೆ ಮಾಡ್ತೀವಿ. ನಾಯಕರನ್ನ ಫಾಲೋ ಮಾಡುವವರು ತುಂಬಾ ಜನ ಇರ್ತಾರೆ. ಇದನ್ನ ಜನ ನಾಯಕರು ಅರ್ಥ ಮಾಡಿಕೊಳ್ಳಬೇಕು. ಲಾಕ್ ಡೌನ್ ಮಾಡಿ ಜನ್ರ ಆರ್ಥಿಕ ಪರಿಸ್ಥಿತಿ ಕೆಟ್ಟು ಹೋದರೆ ಕೊಲೆ ಸುಲಿಗೆ ಹೆಚ್ಚಾಗುತ್ತವೆ. ಮುಖ್ಯಮಂತ್ರಿಗಳು ಕೊರೊನಾಗೆ ಕೇವಲ 2 ಗಂಟೆ ಟ್ರಿಟ್ ಮೆಂಟ್ ಪಡೆದು ವಾಪಸ್ ಬಂದಿದ್ದಾರೆ. ಈಗಿನ ಕೊರೊನಾ ಮೈಲ್ಡ್ ಅಂತಾ ಎಲ್ಲರಿಗೂ ಗೊತ್ತಿದೆ. ಇದನ್ನು ಮನಗಂಡು ವೀಕೆಂಡ್ ಕರ್ಪ್ಯೂ, ಶೇ.50 ರಷ್ಟು ನಿಯಮವನ್ನ ಸಡಿಲ ಮಾಡಿ ಎಂದಿದ್ದಾರೆ.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಮಾತನಾಡಿ, ಲಸಿಕೆ ಪಡೆದ ಮೇಲೂ ಲಾಕ್ ಡೌನ್ ಯಾಕೆ? ಈಗಾಗಲೇ ಶೇ.95 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಲಸಿಕೆಗಿಂತ ಮೊದಲು ಲಾಕ್ ಡೌನ್ ಮಾಡಿದ್ದು ಸರಿ. ಲಸಿಕೆ ಪಡೆದ ಮೇಲೂ ಲಾಕ್ ಡೌನ್ ಕ್ರಮ ಸರಿಯಲ್ಲ. ಇದರಿಂದ ಜನರಿಗೆ ಲಸಿಕೆ ಮೇಲೆ ಡೌಟ್ ಬರಲು ಶುರುವಾಗಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರ ಅಲ್ಲ. ಅವೈಜ್ಞಾನಿಕವಾಗಿ ವೀಕೆಂಡ್ ಕರ್ಪ್ಯೂ ಮಾಡೋದ್ರಿಂದ ಸಾಕಷ್ಟು ವ್ಯಾಪಾರ ನೆಲ ಕಚ್ಚಿದೆ. ಸರ್ಕಾರಕ್ಕೆ ಲಾಕ್ ಡೌನ್ ನಿಂದ ಕೆಟ್ಟ ಹೆಸರು ಬರುತ್ತದೆ. ಶೇ.50 ರಷ್ಟು ಗ್ರಾಹಕರನ್ನು ಇಟ್ಟುಕೊಂಡು ವ್ಯಾಪಾರ ಮಾಡಿ ಅಂತೀರಾ. ಹೋಟೆಲ್ ಉದ್ಯಮಕ್ಕೆ ಈ ರೀತಿ ನಿರ್ಬಂಧ ಸರಿಯಲ್ಲ. ಸಾವಿರಾರು ಮಂದಿ ಸಭೆ ಸೇರಬಹುದು. ಆದರೆ ಹೋಟೆಲ್ ನಲ್ಲಿ ಊಟ ಮಾಡಲು ಬಂದ್ರೆ ನಿಷೇಧ ತರ್ತಿರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.