ಉಚಿತ ಸೇವೆ ನೀಡಲು ಮುಂದಾದ ‘ಫ್ರೀ ಡಾಕ್ಟರ್’ ಡಾ.ಪಾಮುಲ ಪರ್ತಿ ರಾಮರಾವ್
1 min readಮೈಸೂರು: ವೈದ್ಯೋ ನಾರಾಯಣೋ ಹರಿ ಎಂದು ಕಾಯಿಲೆ ಬಿದ್ದ ಸಂದರ್ಭ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಕ್ಲಿನಿಕ್ ಗಳತ್ತ ಮುಖ ಮಾಡಿದಾಗ ಕೆಲವೊಬ್ಬರು ಉತ್ತಮ ಚಿಕಿತ್ಸೆಗಿಂತ ಹಣಕ್ಕೆ ಹೆಚ್ಚು ಬೆಲೆ ನೀಡುವ ಪ್ರಸ್ತುತ ಸಮಾಜದಲ್ಲಿ ವೈದ್ಯರೊಬ್ಬರು ಉಚಿತ ಸೇವೆ ನೀಡುವ ಮೂಲಕ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮನೆಮಾತಾಗಿ ಪ್ರಸ್ತುತ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ರೋಗಿಗಳಿಗೆ ಉಚಿತ ಸೇವೆ ನೀಡಲು ಮುಂದಾಗಿದ್ದಾರೆ.
ಪ್ರಧಾನಮಂತ್ರಿಗಳಾಗಿದ್ದ ಪಿ.ವಿ ನರಸಿಂಹ ರಾವ್ ರವರ ಸಹೋದರ ಪತ್ರಕರ್ತ ಶ್ರೀ ವಾಮುಲು ಪರ್ತಿ ಸದಾಶಿವರಾವ್ ಅವರ ಮಗ ಡಾ.ಪಾಮುಲ ಪರ್ತಿ ರಾಮರಾವ್ ಕೀಲುನೋವು ಸಂಬಂಧಿತ ಸಮಸ್ಯೆಗೆ ರೋಗಿಗಳಿಂದ ಯಾವುದೇ ಹಣ ಪಡೆಯದೆ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಫ್ರೀ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದಾರೆ.
ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ತಮ್ಮ ತೆಲುಗು ದಿನಪತ್ರಿಕೆ ಕಾಕತೀಯ ದಲ್ಲಿ ಓದುಗರಿಗೆ ಪಾರದರ್ಶಕ ವಿಚಾರ ಮುಟ್ಟಿಸುತ್ತಿದ್ದ ಪತ್ರಕರ್ತ ಶ್ರೀ ವಾಮುಲು ಪರ್ತಿ ಸದಾಶಿವ ರಾವ್ ಅವರು ಮೆಡಿಕಲ್ ವಿದ್ಯಾಭ್ಯಾಸ ಮುಗಿಸಿದ ತಮ್ಮ ಮಗನಿಗೆ ಚಿಕಿತ್ಸೆಗೆಂದು ಬರುವ ರೋಗಿಗಳಿಂದ ಹಣ ಪಡೆಯದೆ ಉಚಿತವಾಗಿ ಚಿಕಿತ್ಸೆ ನೀಡು ಎಂದು ಹೇಳಿದ್ದರಿಂದ ಪ್ರೇರೇಪಣೆಗೊಂಡ ಡಾ.ಪಾಮುಲ ಪರ್ತಿ ರಾಮರಾವ್ ಅವರು ವೈದ್ಯಕೀಯ ವೃತ್ತಿ ಜೀವನ ಆರಂಭಿಸಿದಾಗಿನಿಂದ ಇದುವರೆಗೂ ಯಾವುದೇ ಒಬ್ಬ ರೋಗಿಯಿಂದ ಹಣ ಪಡೆಯದೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಅವರ ಸಾಮಾಜಿಕ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.
1981 ರಲ್ಲಿ ವರಾಂಗಲ್ ನ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಆಯುರ್ವೇದ ವಿದ್ಯಾಭ್ಯಾಸ ಮುಗಿಸಿ 1985 ರಲ್ಲಿ ಕೊತಗೆಡಮ್ ಭದ್ರಾಚಲಂ ಎಂಬ ಗುಡ್ಡಗಾಡು ಪ್ರದೇಶದ ಕಟ್ಟಕಡೆಯ ಹಳ್ಳಿಯಲ್ಲಿ ಮೆಡಿಕಲ್ ಆಫೀಸರ್ ಆಗಿ 1986 ರಿಂದ ಕಮ್ಮಮ್ ಜಿಲ್ಲೆಯಲ್ಲಿ ಪ್ರತಿನಿತ್ಯ ರೂ.75 ರಂತೆ ಸರ್ಕಾರಿ ವೈದ್ಯಕೀಯ ಸೇವೆ ಪ್ರಾರಂಭಿಸಿದರು, 1993 ರಿಂದ ವರಾಂಗಲ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಂತರ ಅದೇ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ 2016 ರಲ್ಲಿ ನಿವೃತ್ತಿಯಾಗುವವರೆಗೆ ವಿಶ್ವದಾದ್ಯಂತ 4 ಲಕ್ಷ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿರುವುದು ಡಾ.ಪಾಮುಲ ಪರ್ತಿ ರಾಮರಾವ್ ಅವರ ಸಾಮಾಜಿಕ ಸೇವೆಗೆ ಸಂದ ಹೆಗ್ಗಳಿಕೆಯಾಗಿದೆ.
ಅಪಾರ ದೈವಭಕ್ತರಾಗಿರುವ ಡಾ. ಪಾಮುಲ ಪರ್ತಿ ರಾಮರಾವ್ ಅವರು ಹೊಸದಾಗಿ ಮಸಾಜ್ ಚಿಕಿತ್ಸಾ ವಿಧಾನ (ಸಿಯೊಟಿಕ್) ಸರ್ಜಿಕಲ್ ಸ್ಯಾಂಡಿಲೈಸಿಸ್ ಕಂಡುಹಿಡಿದು ಮಂಡಿ ಮತ್ತು ಕೀಲು ನೋವಿನ ಚಿಕಿತ್ಸೆಯಲ್ಲಿ ತಜ್ಞರಾಗಿ ಹೊರಹೊಮ್ಮಿರುವುದನ್ನು ಸಹಿಸದ ಹಲವು ಅಲೋಪತಿ ಮತ್ತು ಆಯುರ್ವೇದ ವೈದ್ಯರು ಇವರ ವಿರುದ್ಧ ಆರೋಗ್ಯ ಇಲಾಖೆಗೆ ದೂರು ನೀಡಿದರೂ ಇವರ ವಿರುದ್ಧದ ಯಾವುದೇ ಪಿತೂರಿಯ ಷಡ್ಯಂತ್ರ ಸಫಲವಾಗಿಲ್ಲ, ಕೀಲು ಮತ್ತು ಮಂಡಿ ನೋವಿನ ಚಿಕಿತ್ಸೆಗೆ ಎಕ್ಸರೇ, ಎಂಆರ್ ಐ, ಸಿಟಿ ಸ್ಕ್ಯಾನ್ ವಿಧಾನ ಅನುಸರಿಸದೇ ಉಚಿತವಾಗಿ ಚಿಕಿತ್ಸೆ ನೀಡುತ್ತಾ ರೋಗಿಗಳ ಪಾಲಿನ ಆಶಾಕಿರಣವಾಗಿ ಕೀಲು ಮತ್ತು ಮಂಡಿ ನೋವಿನ ರೋಗಿಗಳ ಪಾಲಿನ ಸಂಜೀವಿನಿಯಾಗಿದ್ದಾರೆ.
ಇವರ ಸೇವೆಯನ್ನು ಮನಗಂಡು ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ತಮ್ಮ ಆಶ್ರಮಗಳಲ್ಲಿ ಚಿಕಿತ್ಸೆ ನೀಡಲು ಕೋರಿದಾಗ ಅವರ ಮಾತಿಗೆ ಒಪ್ಪಿ ಕಳೆದ 1 ವರ್ಷದಿಂದ ಉಚಿತ ಚಿಕಿತ್ಸೆ ನೀಡುತ್ತಾ ಬರುತ್ತಿದ್ದು ಪ್ರಸ್ತುತ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಪ್ರತಿ ತಿಂಗಳ ಒಂದನೇ ತಾರೀಕಿನಿಂದ ಹತ್ತನೇ ತಾರೀಕಿನವರೆಗೆ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಹಾಗೂ ಸಂಜೆ 5 ಗಂಟೆಯಿಂದ 8 ಗಂಟೆಯವರೆಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು ಕೀಲು ಹಾಗೂ ಮೂಳೆ ನೋವು ಕಾಯಿಲೆ ಸಂಬಂಧಿತ ರೋಗಿಗಳು ಇವರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ, ಕಾಯಿಲೆ ಎಂದು ವೈದ್ಯರ ಬಳಿ ಹೋದಾಗ ಹಲವು ವಿಧದ ಪರೀಕ್ಷೆಗಳನ್ನು ಮಾಡಿಸಿ ಹಣ ವಸೂಲಿ ಮಾಡುವ ಕೆಲ ವೈದ್ಯರುಗಳ ಮಧ್ಯೆ ಕೀಲು ಮತ್ತು ಮಂಡಿ ನೋವಿನ ಚಿಕಿತ್ಸೆಗೆ ಯಾವುದೇ ವಿಧದ ಎಕ್ಸರೇ, ಸಿಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನ್ ಒಳಪಡಿಸದೆ ಕೇವಲ ಮಸಾಜ್ (ಸಿಯೊಟಿಕ್) ವಿಧಾನದಿಂದ ರೋಗಿಗಳ ಕಾಯಿಲೆ ಗುಣಪಡಿಸುತ್ತಿರುವ ಡಾ.ಪಾಮುಲ ಪರ್ತಿ ರಾಮರಾವ್ ಅವರ ಸೇವೆ ಸಾಕಷ್ಟು ಬಡಜನರ ಚಿಕಿತ್ಸೆಗೆ ಸಹಕಾರಿಯಾಗಲಿದೆ..
ಈ ರೀತಿಯ ಸಾಮಾಜಿಕ ಸೇವಾ ಕಳಕಳಿಯ ವೈದ್ಯರ ಸೇವೆ ಸಮಾಜಕ್ಕೆ ಪ್ರಸ್ತುತ ಅವಶ್ಯವಿದ್ದು ಇವರ ಸೇವೆ ಮತ್ತಷ್ಟು ವೈದ್ಯರಿಗೆ ಸ್ಪೂರ್ತಿಯಾಗಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ