Exclusive : ಗೌರವ ಡಾಕ್ಟರೇಟ್ ಸ್ವೀಕರಿಸಿ ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿದ ಸಾಲುಗಳು ನಿಜಕ್ಕು ಮನಮುಟ್ಟುವಂತಿದೆ
1 min readಮೈಸೂರು ವಿಶ್ವವಿದ್ಯಾನಿಲಯ 102 ನೇ ಘಟಿಕೋತ್ಸವ.!
–ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನುಡಿ!
- ಗೌರವಾನ್ವಿತ ರಾಜ್ಯಪಾಲರೇ’
ಸನ್ಮಾನ್ಯ ಕುಲಪತಿಗಳಾದ ಪ್ರೊ.ಜಿ. ಹೇಮಂತ ಕುಮಾರ್ ಅವರೆ , ಘಟಿಕೋತ್ಸವ ಭಾಷಣ ಮಾಡಿದ ಪ್ರೊ.ಎಸ್.ಸಿ.ಶರ್ಮ ಅವರೆ, ಇಂದು ಗೌರವ ಡಾಕ್ಟರೇಟ್ ಸ್ವೀಕರಿಸಿರುವ ಡಾ.ವಾಸುದೇವ ಕೆ.ಆತೆ ಅವರೆ , ಶ್ರೀಮಾನ್ ಎಂ.ಮಹಾದೇವಸ್ವಾಮಿ ಅವರೆ, ವೇದಿಕೆಯಲ್ಲಿರುವ ಎಲ್ಲ ಗಣ್ಯರೇ..
ಸಭೆಯಲ್ಲಿರುವ ಎಲ್ಲ ಮಾನ್ಯರೇ.
ನನ್ನ ಪತಿಯವರಾದ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಪ್ರಸ್ತುತ 102 ನೆಯ ವಾರ್ಷಿಕ ಪಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿರುವುದಕ್ಕೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು, ಸಮಕುಲಾಧಿಪತಿಗಳು ಕುಲಪತಿಗಳು ಹಾಗೂ ವಿವಿಧ ಪ್ರಾಧಿಕಾರ ವರ್ಗದವರನ್ನು ವಂದಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ.
ನನ್ನ ಪತಿಯವರಾದ ಶ್ರೀ ಮನೀತ್ ರಾಜ್ ಕುಮಾರ್ ಅವರು ತಮ್ಮೆಲ್ಲರಿಗೂ ತಿಳಿದಿರುವಂತೆ ಪ್ರತಿಕ್ಷಣವೂ ಜೀವಚೈತನ್ಯದಿಂದ ಪುಟಿಯುತ್ತಿದ್ದಂಥ ವಿಶಿಷ್ಟ ವ್ಯಕ್ತಿಯಾಗಿದ್ದರು. ಒಂದರ್ಥದಲ್ಲಿ ಎರಡು ಜನಕ್ಕಾಗುವಷ್ಟು ಚಟುವಟಿಕೆಗಳನ್ನು ಅವರು ಒಂದೇ ಜನ್ಮಕ್ಕೆ ಅಡಕಗೊಳಿಸಿದಂತೆ ಭಾಸವಾಗುತ್ತದೆ. ಏನೇ ಇರಲಿ, ಅವರ ಪ್ರಸ್ವ ಬಾಳಿನಲ್ಲಿ ಕನ್ನಡ ನಾಡಿನ ಕಣ್ಮಣಿಯಾಗಿ ಅವರ ಪೂಜ್ಯ ತಂದೆಯವರೂ ನಮ್ಮ ಪಿತೃ ಸಮಾನರಾದ ಡಾ.ರಾಜ್‌ಕುಮಾರ್ ಅವರ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದರು.
- ಆ ವಿಚಾರವಾಗಿ ಇಡೀ ಕನ್ನಡವಾಡ ಅವರನ್ನು ಕೊಂಡಾಡುತ್ತಿದೆ. ನಮ್ಮ ಕುಟುಂಬದ ವ್ಯಕ್ತಿಯಾಗಿದ್ದ ಪುನೀತ್ ಅವರು ಇಂದು ಕರ್ನಾಟಕದ ಹೆಮ್ಮೆಯ ಕುವರರಾಗಿದ್ದಾರೆ. ಘನತೆವೆತ್ತ ಮೈಸೂರು ವಿಶ್ವವಿದ್ಯಾನಿಲಯ 107 ನೇ ಇಸವಿಯಲ್ಲಿ ಪೂಜ್ಯ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಅದೇ ಪದವಿಯನ್ನು ಇಂದು ಶ್ರೀ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಿದೆ. ಪುನೀತ್ ರಾಜ್‌ಕುಮಾರ್ ಅವರ ಸತ್ಕಾರ್ಯಗಳನ್ನು ಮುಂದುವರಿಸಲು ಇದರಿಂದ ಸ್ಫೂರ್ತಿ ನೀಡಿದಂತಾಗಿದೆ. ನಮ್ಮ ವಿಸ್ತ್ರತ ಕುಟುಂಬದ ಎಲ್ಲ ಸದಸ್ಯರ ಪರವಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ತುಂಬು ಹೃದಯದ ಧನ್ಯವಾದಗಳನ್ನೂ, ಪುನೀತ್ ಅವರ ಅಭಿಮಾನಿ ದೇವರುಗಳಿಗೆ ನಮಸ್ಕಾರಗಳನ್ನೂ ಈ ಮೂಲಕ ಸಮರ್ಪಿಸುತ್ತಿದ್ದೇನೆ .