ಸತ್ಯ & ಮಯೂರ ಪಿಕ್ಚರ್ಸ್ ಪ್ರೊಡಕ್ಷನ್ ನಡಿ ಹೊಸ ಸಿನಿಮಾ ಅನೌನ್ಸ್
1 min readರಾಮಾ ರಾಮಾ ರೇ, ಒಂದಲ್ಲ ಎರಡಲ್ಲ, ಮ್ಯಾನ್ ಆಫ್ ದಿ ಮ್ಯಾಚ್ ಹೀಗೆ ಹೊಸ ಬಗೆಯ ಶೀರ್ಷಿಕೆ ಹಾಗೂ ಕಥಾನಕದ ಮೂಲಕ ಚಿತ್ರಪ್ರೇಮಿಗಳನ್ನು ರಂಜಿಸುತ್ತಿರುವ ನಿರ್ದೇಶಕ ಕಂ ನಿರ್ಮಾಪಕ ಸತ್ಯಪ್ರಕಾಶ್ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾ ಮೂಲಕ ಸತ್ಯಪ್ರಕಾಶ್ ನಿರ್ದೇಶಕನಾಗಿ ನಿಮ್ಮ ಮುಂದೆ ಹಾಜರಾಗ್ತಿಲ್ಲ. ಬದಲಾಗಿ ನಿರ್ಮಾಪಕನಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಂಜುನಾಥ್ ದಾಸೇಗೌಡ ಒಡೆತನದ ಮಯೂರ ಪಿಕ್ಚರ್ಸ್ ಹಾಗೂ ಸತ್ಯಪ್ರಕಾಶ್ ಸಾರಥ್ಯದ ಸತ್ಯ ಪಿಕ್ಚರ್ಸ್ ನಡಿ ಪ್ರೊಡಕ್ಷನ್ ನಂಬರ್ 2 ಸಿನಿಮಾ ಅನೌನ್ಸ್ ಆಗಿದ್ದು, ಇವತ್ತು ಬೆಂಗಳೂರಿನ ಬನಗಿರಿ ವಿನಾಯಕ ದೇಗುಲದಲ್ಲಿ ಮುಹೂರ್ತ ನೆರವೇರಿದೆ.
ಸತ್ಯ ಮತ್ತು ಮಯೂರ್ ಪಿಕ್ಚರ್ಸ್ ಅರ್ಪಿಸುವ ಪ್ರೊಡಕ್ಷನ್ ನಂಬರ್-2 ಸಿನಿಮಾಗೆ ಸತ್ಯಪ್ರಕಾಶ್ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಡಿ ಮಂಜುನಾಥ್ ಕೂಡ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಈ ಹಿಂದೆ ಇವರಿಬ್ಬರು ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ನಿರ್ಮಾಣ ಮಾಡಿದ್ದು, ಇದೀಗ ಮತ್ತೊಂದು ಹೊಸ ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ. ಈ ಚಿತ್ರಕ್ಕೆ ಭಾಗ್ಯ ರಾಜ್, ಕಳ್ಳಬೆಟ್ಟರ ದರೋಡೆಕೋರರು, ರಾಜು ಜೇಮ್ಸ್ ಬಾಂಡ್ ಸಿನಿಮಾಗಳ ಸಾರಥಿ ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳ್ತಿದ್ದು, ಅನೂಪ್ ಸೀಳಿನ್ ಸಂಗೀತ, ಲವಿತ್ ಕ್ಯಾಮೆರಾ, ಅಜಯ್ ಕುಮಾರ್ ಸಂಕಲನ, ವರದರಾಜ್ ಕಮತ್ ಕಲಾ ನಿರ್ದೇಶನ ಸಿನಿಮಾಕ್ಕಿದೆ.
ಸದ್ಯ ಸಿನಿಮಾ ಪ್ರೊಡಕ್ಷನ್ ನಂಬರ್ 2 ಅಂತಾ ಶೀರ್ಷಿಕೆ ಇಡಲಾಗಿದ್ದು, ರವಿಶಂಕರ್, ಸಾಧುಕೋಕಿಲನಂತಹ ಘಟಾನುಘಟಿ ತಾರಾಬಗಳ ಸಿನಿಮಾದಲ್ಲಿದೆ. ಈ ತಿಂಗಳಾಂತ್ಯಕ್ಕೆ ಉಳಿದ ಸ್ಟಾರ್ ಕಾಸ್ಟ್ ಜೊತೆಗೆ ಟೈಟಲ್ ಮೂಲಕ ಇಡೀ ಚಿತ್ರತಂಡ ನಿಮ್ಮ ಮುಂದೆ ಹಾಜರಾಗಲಿದ್ದು, ಮುಂದಿನ ತಿಂಗಳ ಎರಡನೇ ವಾರದಿಂದ ಶೂಟಿಂಗ್ ಅಖಾಡಕ್ಕೆ ಧುಮುಕಲು ಚಿತ್ರತಂಡ ಸಜ್ಜಾಗಿದೆ. ಬರೋಬ್ಬರಿ 45 ದಿನ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಂಡಿದೆ.