ಮೈಸೂರು : ಪ್ರತಿಯೊಬ್ಬ ಉದ್ಯಮಿಗಳು ಡಿಜಿಟಲ್ ಕ್ರಾಂತಿಗೆ ಹೊಂದಿಕೊಳ್ಳಬೇಕು- ಡಿಸಿ ಡಾ.ಬಗಾದಿ ಗೌತಮ್!

1 min read

ಮೈಸೂರು : ಡಿಜಿಟಲ್ ಕ್ರಾಂತಿಗೆ ಪ್ರತಿಯೊಬ್ಬ ಉದ್ಯಮಿಗಳು ಹೊಂದಿಕೊಳ್ಳಬೇಕಾಗಿದೆ. ಡಿಜಿಟಲೈಸ್ ಆಗದಿದ್ದರೆ ನೀವು ಹಿಂದುಳಿದಿದ್ದೀರಿ ಎಂದೇ ಅರ್ಥ. ಹಾಗಾಗಿ ಇದನ್ನು ಬಳಸಿಕೊಂಡು ಹೆಚ್ಚು ವಹಿವಾಟು ನಡೆಸಿ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಹೇಳಿದರು.

ಗುರುವಾರ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ವಾಣಿಜ್ಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

-ಸೇವಾ ವಲಯದಲ್ಲಿ ಜಿಲ್ಲೆ ಉತ್ತಮ ಸ್ಥಿತಿಯಲ್ಲಿದೆ. ದೇಶದ ಆರ್ಥಿಕತೆಯಲ್ಲಿ ರಫ್ತು ಕೂಡ ಮಹತ್ತರ ಪಾತ್ರವಿರುವುದರಿಂದ ಸರಕು ರಫ್ತಿನಲ್ಲೂ ಉತ್ತಮ ಸ್ಥಾನ ಹೊಂದಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.

ಮೈಸೂರಿನಲ್ಲಿ ಇನ್ಫೋಸಿಸ್, ವಿಪ್ರೊ, ಟಿವಿಎಸ್ ಸಂಸ್ಥೆಗಳು ವಿಶ್ವ ಮಾನ್ಯತೆ ಗಳಿಸಿ ಸೇವೆ ಒದಗಿಸುತ್ತಿವೆ. ಅದೇ ರೀತಿ ಸರಕು ಸೇವೆಯು ತನ್ನ ವಹಿವಾಟನ್ನು ಜಗತ್ತಿನಾದ್ಯಂತ ಪಸರಿಸಬೇಕಿದೆ. ಇದಕ್ಕಾಗಿ ಸರಕಾರ, ಜಿಲ್ಲಾಡಳಿತ ನಿಮಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಕೆ.ಲಿಂಗರಾಜು ಅವರು ಮಾತನಾಡಿ, ಸೇವಾ ವಲಯದಲ್ಲಿ ಬೆಂಗಳೂರು ನಂತರ ಮೈಸೂರು ಎರಡನೇ ಸ್ಥಾನದಲ್ಲಿದ್ದು, ಸರಕು ಸೇವಾ ವಹಿವಾಟಿನಲ್ಲಿ ರಾಜ್ಯದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. 2020 ಸೆಪ್ಟೆಂಬರ್‌ನಿಂದ ಮಾರ್ಚ್ 2021ರವರೆಗೆ ಜಿಲ್ಲೆಯಿಂದ 2,914 ಕೋಟಿ ರೂ. ಸರಕು ಸೇವಾ ವಹಿವಾಟು ನಡೆಸಿದೆ ಎಂದು ಮಾಹಿತಿ ನೀಡಿದರು.

ಮೈಸೂರಿನಲ್ಲಿ ಸುಮಾರು 157 ಘಟಕಗಳಿಂದ ಅಮೆರಿಕ, ಜರ್ಮನಿ, ವಿಯಟ್ನಾಂ, ಅರಬ್ ರಾಷ್ಟ್ರ ಸೇರಿದಂತೆ ಸುಮಾರು 63 ದೇಶಗಳಿಗೆ ನಾನಾ ಉತ್ಪನ್ನಗಳನ್ನು ರ್ತು ಮಾಡಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಟಿವಿಎಸ್, ಜೆ.ಕೆ.ಟೈರ್ಸ್‌, ಆಟೋಮೆಟಿವ್ ಎಕ್ಸೆಲ್, ರಂಗರಾವ್ ಸನ್ಸ್‌ ಸೇರಿದಂತೆ ನಾನಾ ಪ್ರಮುಖ ಸಂಸ್ಥೆಗಳ ಉತ್ಪನ್ನಗಳು ಒಳಗೊಂಡಿದೆ,’’ ಎಂದು ಹೇಳಿದರು.

ಪ್ರತಿ ಜಿಲ್ಲೆಯನ್ನೂ ಎಕ್ಸ್‌ಪೋರ್ಟ್ ಹಬ್ ಅನ್ನಾಗಿ ಮಾಡಬೇಕೆಂಬುದು ಪ್ರಧಾನಮಂತ್ರಿಗಳ ಮಹಾದಾಸೆಯಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕೇಂದ್ರದ ಕಮಿಟಿ ರಚಿಸಿದ್ದು, 5-6 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪೋರ್ಟ್ ಹೌಸ್ ಕೂಡ ನಿರ್ಮಾಣ ಹಂತದಲ್ಲಿದೆ. ಸದ್ಯದಲ್ಲೇ ಪೂರ್ಣಗೊಂಡು ಕಾರ್ಯನಿರ್ವಹಿಸಲಿದೆ ಎಂದರು.

ಸಭೆಯಲ್ಲಿ ಜಿಲ್ಲಾಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಗೋಪಿನಾಥ ಶಾಸ್ತ್ರಿ, ಮೈಸೂರು ಕೈಗಾರಿಕೆ ಸಂಘದಿಂದ ಸುರೇಶ್ ಕುಮಾರ್ ಜೈನ್ ಸೇರಿದಂತೆ ಇತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *