ಡೆಲ್ಟಾ ಪ್ಲಸ್ ವೈರಸ್ ಆತಂಕ: ಸರ್ಕಾರಕ್ಕೆ ಸಲಹೆ ನೀಡಿದ ಸಿದ್ದರಾಮಯ್ಯ

1 min read

ಬೆಂಗಳೂರು: ಕೊರೊನಾ ಎರಡನೇ ಅಲೆ ಮುಗಿಯುವ ಮೊದಲೇ ಡೆಲ್ಟಾ ಪ್ಲಸ್ ಎಂಬ ಇನ್ನಷ್ಟು ಉಗ್ರವಾದ ಕೊರೋನಾದ ರೂಪಾಂತರಿ ವೈರಸ್ಸು ದೇಶದಲ್ಲಿ ಮತ್ತೆ ವೇಗವಾಗಿ ಹರಡುವ ಭೀತಿ ಸೃಷ್ಟಿಯಾಗಿದೆ. ಇದನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಲವು ರೀತಿಯ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಬೇಕಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವಾರು ಸಲಹೆ ನೀಡಿದ್ದಾರೆ.

ದೇಶದ ಶೇ.80 ರಷ್ಟು ಜನರಿಗೆ ಲಸಿಕೆ ನೀಡುವವರೆಗೆ ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸುವುದು ಸೂಕ್ತ. ದೇಶದ ಯಾವ ಯಾವ ಸ್ಥಳಗಳಲ್ಲಿ ಕೊರೋನ ವೈರಸ್ಸಿನ ಡೆಲ್ಟಾ ಪ್ಲಸ್ ಪ್ರಬೇಧ ಪತ್ತೆಯಾಗಿದೆಯೊ ಆ ಸ್ಥಳಗಳ ಕುರಿತು ತೀವ್ರ ನಿಗಾ ವಹಿಸಿ ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು.

ಹೊಸ ಹೊಸ ತಳಿಗಳಾಗಿ ಅತ್ಯಂತ ವೇಗವಾಗಿ ರೂಪಾಂತರ ಹೊಂದುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರಗಳು ವ್ಯಾಪಕವಾಗಿ ಮತ್ತು ಉಚಿತವಾಗಿ ಸಾರ್ವಜನಿಕ ಆಂದೋಲನಗಳ ಮೂಲಕ ಲಸಿಕೆಗಳನ್ನು ನೀಡಬೇಕು. ಈಗ ರಾಜ್ಯಗಳ ಬಳಿ 2.5 ಕೋಟಿ ಡೋಸ್ ಲಸಿಕೆಗಳಿವೆ ಎಂದು ಬೇರೆ ಹೇಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಬಳಿ ಎಷ್ಟಿವೆ ಎಂದು ಹೇಳುತ್ತಿಲ್ಲ. ಲಸಿಕೆ ಉತ್ಪಾದಕ ಕಂಪೆನಿಗಳು ಪ್ರತಿ ದಿನ ಸರ್ಕಾರಕ್ಕೆ ಮತ್ತು ಖಾಸಗಿಯವರಿಗೆ ನೀಡಿದ ಲಸಿಕೆಗಳ ಕುರಿತು ಪ್ರಕಟಣೆಗಳನ್ನು ಹೊರಡಿಸಬೇಕು.

ಮೂರನೆ ಅಲೆಯ ಕುರಿತು ತಜ್ಞರು ಮಾಡಿರುವ ಶಿಫಾರಸ್ಸುಗಳಂತೆ, ಖಾಸಗಿ ಆಸ್ಪತ್ರೆಗಳು ಕಂಪೆನಿಗಳಿಂದ ಲಸಿಕೆಗಳನ್ನು ಸ್ವೀಕರಿಸಿ ಗರಿಷ್ಠ 10 ದಿನಗಳ ಕಾಲ ಮಾತ್ರ ದಾಸ್ತಾನಿರಿಸಿಕೊಳ್ಳಬೇಕೆಂಬ ಕುರಿತು ಆದೇಶ ಹೊರಡಿಸುವಂತೆ ತಿಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಮಾಡಬೇಕಾದ ಕೆಲಸ ಇದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ದೇಶದ ಸಮಸ್ತ ಜನರಿಗೆ ಮುಂದಿನ ಮೂರು- ನಾಲ್ಕು ತಿಂಗಳಲ್ಲಿ ಲಸಿಕೆ ಹಾಕುವಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಲಸಿಕೆಗಳ ಮೇಲಿನ ಪೇಟೆಂಟುಗಳನ್ನು ಮೊದಲು ಕಿತ್ತು ಹಾಕಬೇಕು ಎಂದು ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ.

ಸರ್ಕಾರ ಕಾರ್ಪೊರೇಟ್ ಕಂಪೆನಿಗಳ ಓಲೈಕೆ ಮನಸ್ಥಿತಿಯಿಂದ ಹೊರಬಂದು, ಅವುಗಳ ಮೇಲೆ ಪ್ರಬಲ ಹಿಡಿತ ಸಾಧಿಸಬೇಕು. ಕೊರೋನ ಲಸಿಕೆಗಳನ್ನು ‘ಜೆನೆರಿಕ್ ಡ್ರಗ್’ಗಳ ವ್ಯಾಪ್ತಿಗೆ ತಂದು ಸರ್ಕಾರಗಳೆ ಉತ್ಪಾದನೆ ಮತ್ತು ವಿತರಣೆಗಳನ್ನು ನಿಯಂತ್ರಿಸಬೇಕು. ಹೀಗಾದರೆ ಗರಿಷ್ಠ 50 ರೂಪಾಯಿಗಳಿಗೆ ಲಸಿಕೆ ದೊರೆಯುತ್ತದೆ ಎಂದು ಹೇಳಿದ್ದಾರೆ.

ಮೋದಿಯವರು ಜೂನ್ 30 ರಂದು ‘ಕೋವಿನ್ ಗ್ಲೋಬಲ್ ಕಾನ್‍ಕ್ಲೇವ್’ ನಡೆಸಲು ಉದ್ದೇಶಿಸಿದ್ದಾರೆಂಬ ಮಾಹಿತಿ ಇದೆ. ಈ ಸಮಾವೇಶದಲ್ಲಿ ಭಾರತವು ಕೊರೋನವನ್ನು ಎದುರಿಸಿದ ರೀತಿಗಳನ್ನು ತಿಳಿಸುವುದಾಗಿ ಹೇಳಿದ್ದಾರೆ. ಇದಂತೂ ಅತ್ಯಂತ ನಾಚಿಕೆಗೇಡಿನ ಮತ್ತು ಅಸೂಕ್ಷ್ಮವಾದ ವಿಷಯ. ಕಳೆದ ಮಾರ್ಚ್ ತಿಂಗಳಿಂದ ದೇಶದಲ್ಲಿ ಏನೇನಾಯಿತು ಎಂದು ಜನರು ಮರೆತು ಬಿಟ್ಟಿದ್ದಾರೆಯೆ? ಹೃದಯವಿರುವ ಮನುಷ್ಯನಿಗೆ ಭೀಕರ ಪಶ್ಚಾತ್ತಾಪ, ಪಾಪಪ್ರಜ್ಞೆಗಳು ಕಾಡಬೇಕಾಗಿತ್ತು. ಅದರ ಬದಲಾಗಿ ಕೊರೋನಾದ ವಿರುದ್ಧ ವಿಜಯ ಸಾಧಿಸಿ ಬಿಟ್ಟಿದ್ದೇವೆ ಎಂಬಂತೆ ವಿಶ್ವದ ಜನರಿಗೆ ತಿಳಿಸಲು ಹೊರಟಿರುವುದನ್ನು ಏನೆನ್ನಬೇಕು? ಇದನ್ನು ನೋಡಿದರೆ ನಮ್ಮ ಪ್ರಧಾನಮಂತ್ರಿಗಳ ಹೃದಯದಲ್ಲಿ ಒಬ್ಬ ಮನುಷ್ಯನಿದ್ದಾನೆ ಎನ್ನಿಸುತ್ತದೆಯೆ? ಮೋದಿಯವರು ತಮ್ಮ ಸಾಧನೆಗಳ ಜಾಗತಿಕ ಸಮಾವೇಶ ನಡೆಸುವ ಬದಲು ವಿಶ್ವದ ನಾಯಕರುಗಳನ್ನು ಒತ್ತಾಯಿಸಿ ಕೊರೋನ ಲಸಿಕೆಯ ಮೇಲಿನ ಪೇಟೆಂಟುಗಳನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಬೇಕು.

ವಿಶ್ವದ ಜನ ಸಮುದಾಯಗಳ ಆರೋಗ್ಯವು ತುರ್ತುಪರಿಸ್ಥಿತಿಯಲ್ಲಿರುವಾಗ, ಕೊರೋನಾದ ನಿರ್ವಹಣೆಯನ್ನು ಆಯಾ ದೇಶಗಳಿಗೆ ಬಿಡುವುದು ಹಾಗೂ ಔಷಧ ಕಂಪೆನಿಗಳ ಲೂಟಿಗೆ ಅವಕಾಶ ಮಾಡಿಕೊಡುವುದು ಅತ್ಯಂತ ಅಪಾಯಕಾರಿಯಾದ ಸಂಗತಿ ಎಂದು ತಿಳಿಸಬೇಕು.

ಜಾಗತಿಕ ಸಮಸ್ಯೆಗೆ ಜಾಗತಿಕ ಪರಿಹಾರಗಳೆ ಬೇಕಾಗುತ್ತವೆಯೆ ಹೊರತು ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಲಾಗದು. ಆದ್ದರಿಂದ ವಿಶ್ವ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಕ್ರಿಯಾಶೀಲಗೊಂಡು ಸದ್ಯದ ತುರ್ತುಪರಿಸ್ಥಿತಿಯನ್ನು ನಿಭಾಯಿಸುವ ಸಾಮೂಹಿಕ ಪ್ರಯತ್ನಗಳಾಗಬೇಕೆಂದು ಒತ್ತಾಯಿಸಬೇಕು. ಯಾಕೆಂದರೆ ವಿಶ್ವದ ಯಾವುದೋ ಭಾಗದಲ್ಲಿ ರೂಪಾಂತರಗೊಂಡ ವೈರಸ್ಸು ಬೆಂಕಿಯಂತೆ ಜಗತ್ತನ್ನು ಆವರಿಸಿ ಬಿಡಬಹುದು. ಹಾಗಾಗಿ ವಿವೇಕವುಳ್ಳ, ವೈಜ್ಞಾನಿಕ ಮನೋಭಾವವುಳ್ಳ ಮನುಷ್ಯರು ಒತ್ತಾಯಿಸಬೇಕಾದ ಕ್ರಮಗಳಿವು.

ಇವುಗಳ ಜೊತೆಗೆ ಜಗತ್ತಿನ ಅನೇಕ ದೇಶಗಳು ತೆಗೆದುಕೊಂಡಿರುವ ಆರ್ಥಿಕ ಪುನಶ್ಚೇತನದ ಪ್ಯಾಕೇಜುಗಳನ್ನು ಘೋಷಿಸಬೇಕೆಂದು ಒತ್ತಾಯಿಸುತ್ತೇನೆ.

ಈ ಸಲಹೆಗಳನ್ನು ಪ್ರಧಾನಿ ಮೋದಿಯವರಿಗೆ ತಿಳಿಸಿ ಅತ್ಯಂತ ತುರ್ತಾಗಿ ಮನುಷ್ಯ ಪರವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವ ಜವಾಬ್ಧಾರಿ ರಾಜ್ಯದ ಆಯ್ಕೆಯಾದ ಸಂಸದರು ಮತ್ತು ಕೇಂದ್ರದ ಸಚಿವರುಗಳ ಮೇಲೆ ಇದೆ. ರಾಜ್ಯದ ಮುಖ್ಯಮಂತ್ರಿಗಳೂ ಕೂಡ ಈ ಕುರಿತು ಪ್ರಧಾನಿಗಳನ್ನು ಒತ್ತಾಯಿಸಬೇಕೆಂದು ಆಗ್ರಹಿಸುತ್ತೇನೆ.

ಪ್ರತಿಯೊಬ್ಬರಿಗೂ ಲಸಿಕೆ, ಹೊಟ್ಟೆಗೆ ಅನ್ನ, ಒಂದಿಷ್ಟು ಆರ್ಥಿಕ ನೆರವು, ಉಚಿತ ಚಿಕಿತ್ಸೆ ನೀಡದಿದ್ದರೆ ಭಾರತ ವಿಶ್ವ ಗುರುವಾಗುವುದಿರಲಿ ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕ ಮತ್ತಿತರ ಸರೀಕ ದೇಶಗಳ ಎದುರು ತಲೆ ಎತ್ತಿ ನಿಲ್ಲುವಂತೆ ಮಾಡಲಾಗದು ಎಂಬ ತಿಳಿವಳಿಕೆಯನ್ನು ಪ್ರಧಾನಿ ಮೋದಿಯವರಿಗೆ ತಿಳಿಸಬೇಕೆಂದು ನಮ್ಮ ರಾಜ್ಯದಿಂದ ಆಯ್ಕೆಯಾದ ಸಂಸದರುಗಳನ್ನು ಮತ್ತು ರಾಜ್ಯದ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *