ನಾಡಹಬ್ಬ ದಸರಾಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ: ಉದ್ಘಾಟನೆಗೆ 100 ಮಂದಿ, ಜಂಬೂ ಸವಾರಿಗೆ 500 ಮಂದಿಗೆ ಅವಕಾಶ

1 min read

ಮೈಸೂರು,ಅ.5- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಇನ್ನೊಂದು ದಿನ ಬಾಕಿಯಿರುವಾಗ ಆಚರಣೆ‌ ಕುರಿತಂತೆ ರಾಜ್ಯ ಸರ್ಕಾರ‌ ಮಾರ್ಗಸೂಚಿ ಹೊರಡಿಸಿದೆ.
ಕೊರೊನಾ ಮೂರನೇ ಅಲೆ ಭೀತಿಯ ನಡುವೆ ನಾಡಹಬ್ಬ ಮೈಸೂರು ದಸರಾಗೆ ಸಕಲ ತಯಾರಿ ನಡೆಯುತ್ತಿದ್ದು, ಈ ವೇಳೆ‌ ಸರ್ಕಾರ ದಸರಾ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಚಾಮುಂಡಿಬೆಟ್ಟದಲ್ಲಿ ನಡೆಯುವ ದಸರಾ‌ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇವಲ 100 ಮಂದಿಗೆ ಅವಕಾಶ ನೀಡಲಾಗಿದ್ದು, ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಂಬೂ ಸವಾರಿಗೆ 500 ಮಂದಿಗೆ ಅವಕಾಶ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಪೊಲೀಸ್, ಕಲಾವಿದರು, ಸಿಬ್ಬಂದಿ, ಮಾಧ್ಯಮದವರು ಸೇರಿದಂತೆ ಪ್ರತಿ ವ್ಯಕ್ತಿಗೂ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ ಪಡೆದಿರಬೇಕು. ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ. ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳುವಂತೆ ಪೊಲೀಸರು ನಿಗಾ ವಹಿಸಬೇಕು.
ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು 2 ಗಂಟೆ ಅವಧಿಯೊಳಗೆ ಮುಗಿಯಬೇಕು. ಅರಮನೆಯ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಅಲ್ಲದೆ, ಇತರ ಜಿಲ್ಲೆಗಳಲ್ಲೂ ಸರಳವಾಗಿ ದಸರಾ ಆಚರಣೆಗೆ ಅನುಮತಿ ನೀಡಲಾಗಿದ್ದು, 400 ಮಂದಿಗೆ ಮಾತ್ರ ಭಾಗವಹಿಸಬಹುದಾಗಿದೆ.
ಇನ್ನು ವರ್ಚುವಲ್ ಮೂಲಕ ಜಂಬೂಸವಾರಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಸಾರ್ವಜನಿಕರು ವರ್ಚುವಲ್‌ https://mysoredasara.gov.in/ ಆಗಿ ದಸರಾ ಜಂಬೂ ಸವಾರಿ ವೀಕ್ಷಿಸಬಹುದಾಗಿದೆ.
ಕೋವಿಡ್‌ ಹಿನ್ನೆಲೆಯಲ್ಲಿ ದಸರಾ ಮಹೋತ್ಸವವನ್ನು ಈ ಬಾರಿ ಅರಮನೆಗಷ್ಟೇ ಸೀಮಿತಗೊಳಿಸಲಾಗಿದೆ. ಸರಳ ದಸರಾ ಜಂಬೂಸವಾರಿಯಲ್ಲಿ ಎಂಟು ಆನೆಗಳು, ಆರು ಸ್ತಬ್ಧಚಿತ್ರ, ಅಶ್ವಾರೋಹಿ ಪಡೆ, ಕಲಾ ತಂಡಗಳು, ಫಿರಂಗಿ ಗಾಡಿ ಇರಲಿವೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಜಂಬೂಸವಾರಿ ಮಾರ್ಗ ನಿಗದಿಪಡಿಸಲಾಗಿದ್ದು, ಅರಮನೆ ಮುಂಭಾಗದಿಂದ ಹೊರಟು ಬಲರಾಮ ದ್ವಾರದಲ್ಲಿ ಕೊನೆಗೊಳ್ಳಲಿದೆ.

About Author

Leave a Reply

Your email address will not be published. Required fields are marked *