ಮೈಸೂರು ದಸರಾ ಅರಮನೆಗೆ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ

1 min read

ಮೈಸೂರು,ಸೆ.16-ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಂಭ್ರಮ ಕಳೆಗಟ್ಟಿದ್ದು, ದಸರಾದಲ್ಲಿ ಆಕರ್ಷಣೆಯ ಕೇಂದ್ರವಾಗಿರುವ ಜಂಬೂಸವಾರಿಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆಗೆ ಆಗಮಿಸಿದೆ.
ಅರಮನೆಗೆ ಆಗಮಿಸಿದ ಗಜಪಡೆಗೆ ಜಿಲ್ಲಾಡಳಿತ ವತಿಯಿಂದ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಅರಮನೆ ಆವರಣದ ಜಯಮಾರ್ತಾಂಡ ದ್ವಾರದಲ್ಲಿ ಬೆಳಿಗ್ಗೆ 8.36 ರಿಂದ 9.11ರ ಶುಭ ಲಗ್ನದಲ್ಲಿ ಗಜಪಡೆಗೆ ಸಚಿವ ಸೋಮಶೇಖರ್ ಅವರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಿದರು. ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷತ್ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ಅರಮನೆಗೆ ಆಗಮಿಸಿದ ಗಜಪಡೆ


ಸೆ.13ರಂದು ವೀರನಹೊಸಳ್ಳಿಯಿಂದ ಆಗಮಿಸಿ ಅರಣ್ಯಭವನದಲ್ಲಿ ಬೀಡು ಬಿಟ್ಟಿದ್ದ ಗಜಪಡೆ ಮೈಸೂರು ಅರಮನೆಯನ್ನು ಪ್ರವೇಶಿಸಿವೆ. ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ಎಂಟು ಆನೆಗಳಾದ ಅಶ್ವತ್ಥಾಮ, ಧನಂಜಯ, ವಿಕ್ರಮ, ಕಾವೇರಿ, ಚೈತ್ರಾ, ಲಕ್ಷ್ಮಿ ಮತ್ತು ಗೋಪಾಲಸ್ವಾಮಿ ಆನೆಗಳು ಅರಮನೆ ಪ್ರವೇಶ ಮಾಡಿದವು. ಮಂಗಳ ವಾದ್ಯ, ಅರಮನೆ ಬ್ಯಾಂಡ್, ಪೂರ್ಣ ಕುಂಭ ಸ್ವಾಗತದ ಮೂಲಕ ಆನೆಗಳನ್ನು ಬರಮಾಡಿಕೊಳ್ಳಲಾಯಿತು. ಕಬ್ಬು, ಬೆಲ್ಲ, ತೆಂಗಿನ ಕಾಯಿ ಕೊಟ್ಟು, ಪೂಜೆ ಸಲ್ಲಿಸಿ ಆನೆಗಳಿಗೆ ಸ್ವಾಗತ ಕೋರಲಾಯಿತು.
ಇದೇ ಮೊದಲ ಬಾರಿಗೆ ದಸರಾ ಪಾಲ್ಗೊಳ್ಳಲು ಬಂದಿರುವ ಅಶ್ವತ್ಥಾಮ ಹೆಸರಿನ ಆನೆ ನಗರದ ಸದ್ದುಗದ್ದಲಕ್ಕೆ ಬೆಚ್ಚಿ ಫುಟ್ಪಾತ್ ಸೇರಿದ ಘಟನೆ ನಡೆಯಿತು. ಅರಣ್ಯಭವನದಿಂದ ಅರಮನೆಗೆ ಬರುವ ವೇಳೆ ಅಶ್ವತ್ಥಾಮ ರಸ್ತೆಯಿಂದ ಫುಟ್ ಪಾತ್ ಗೆ ತೆರಳಿದ್ದ. ಈ ವೇಳೆ ಮಾವುತ ಕಾವಾಡಿ ಅಶ್ವತ್ಥಾಮನನ್ನು ಸಮಾಧಾನಪಡಿಸಿ ಅರಮನೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ದಸರಾ ಮಹೋತ್ಸವದ ಉದ್ಘಾಟಕರು ಯಾರು ಎಂಬುದು ಇನ್ನು ತೀರ್ಮಾನ ಆಗಿಲ್ಲ. ಅಧಿವೇಶನ ಮುಗಿದ ಮೇಲೆ ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಯಾವ ಪಟ್ಟಿ ಅಥವಾ ಶಾರ್ಟ್ ಲಿಸ್ಟ್ ತಯಾರು ಮಾಡಿಲ್ಲ ಎಂದರು.
ದಸರಾ ಉದ್ಘಾಟನೆಗೆ ಗಣ್ಯರ ಆಯ್ಕೆಯನ್ನು ದಸರಾ ಉನ್ನತಾಧಿಕಾರ ಸಮಿತಿಯಲ್ಲಿ ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಸಂಬಂಧ ಯಾರಾದರೂ ಸಲಹೆ ಕೊಡಬಹುದು. ಅದನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಆಯ್ಕೆ ಮುಖ್ಯಮಂತ್ರಿ ಅವರಿಗೆ ಸೇರಿದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ನಿಗಮ ಮಂಡಳಿಗಳ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಎಂ. ಶಿವಣ್ಣ, ಎನ್.ವಿ.ಫಣೀಶ್, ಎಲ್.ಆರ್.ಮಹದೇವಸ್ವಾಮಿ, ಎಂ.ಆರ್.ಕೃಷ್ಣಪ್ಪಗೌಡ, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ಜಿಪಂ ಸಿಇಒ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಡಿಸಿಎಫ್ ಕರಿಕಾಳನ್, ಎಡಿಸಿ ಡಾ. ಮಂಜುನಾಥಸ್ವಾಮಿ, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *