ಹುಬ್ಬಳ್ಳಿಯ ಟೈಗರ್ಸ್‌ಗೆ ಹೆದರಿದ ಶಿವಮೊಗ್ಗ ಸ್ಟ್ರೈಕರ್ಸ್!
1 min readಹುಬ್ಬಳ್ಳಿಯ ಟೈಗರ್ಸ್‌ಗೆ ಹೆದರಿದ ಶಿವಮೊಗ್ಗ ಸ್ಟ್ರೈಕರ್ಸ್
ಮೈಸೂರು : ಮೊಹಮ್ಮದ್ ತಾಹ (78) ಹಾಗೂ ಶ್ರೀನಿವಾಸ್ ಶರತ್ (41) ಅವರ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 6 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿಯಲ್ಲಿ ಮತ್ತೆ ಜಯದ ಲಯಕ್ಕೆ ತಿರುಗಿದೆ. 134 ರನ್ ಜಯದ ಗುರಿ ಹೊತ್ತ ಹುಬ್ಬಳ್ಳಿ ಟೈಗರ್ಸ್ ಪರ ಮೊಹಮ್ಮದ ತಹಾ 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 78 ರನ್ ಸಿಡಿಸಿ ಇನ್ನೂ 16 ಎಸೆತ ಬಾಕಿ ಇರುವಾಗಲೇ ಜಯ ತಂದಿತ್ತರು. ಸಾಧಾರಣ ಮೊತ್ತದಲ್ಲಿ ಸಿದ್ಧಾರ್ಥ್ ಅಸಾಧಾರಣ ಬ್ಯಾಟಿಂಗ್: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್ ಎದುರಾಳಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡವನ್ನು 133 ರನ್‌ಗೆ ಕಟ್ಟಿ ಹಾಕಿತು. ಕೃಷ್ಣಮೂರ್ತಿ ಸಿದ್ಧಾರ್ಥ್ (62) ಮತ್ತು ಡಿ. ಅವಿನಾಶ್ (41) ಹೊರತುಪಡಿಸಿದರೆ ಉಳಿದ ಆಟಗಾರರು ಹುಬ್ಬಳ್ಳಿ ಟೈಗರ್ಸ್ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.
ರೋಹನ್ ಕದಮ್, ಬಿ.ಆರ್. ಶರತ್ ಹಾಗೂ ನಾಯಕ ಕೃಷ್ಣಪ್ಪ ಗೌತಮ್ 1, 3, 4 ಎಂದು ಪೆವಿಲಿಯನ್ ಹಾದಿ ಹಿಡಿದದ್ದು ಶಿವಮೊಗ್ಗ ರನ್ ಗಳಿಕೆಗೆ ನಿಯಂತ್ರಣ ಬೀಳಲು ಪ್ರಮುಖ ಕಾರಣವಾಯಿತು. ನಾಯಕ ಅಭಿಮನ್ಯು ಮಿಥುನ್ (20ಕ್ಕೆ 2) ಹಾಗೂ ಹಾಗೂ ವಾಸುಕಿ ಕೌಶಿಕ್ 25ಕ್ಕೆ 3 ಉತ್ತಮ ಬೌಲಿಂಗ್ ಪ್ರದರ್ಶಿಸಿ ಶಿವಮೊಗ್ಗವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು.
26 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಶಿವಮೊಗ್ಗಕ್ಕೆ ನೆರವಾದುದು ಕೃಷ್ಣಮೂರ್ತಿ ಶರತ್ ಅವರ ಇನ್ನಿಂಗ್ಸ್. 53 ಎಸೆತಗಳನ್ನೆದುರಿಸಿದ ಶರತ್ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 62 ರನ್ ಗಳಿಸಿ ತಂಡಕ್ಕೆ ನೆರವಾದರು. ಇನ್ನೊಂದೆಡೆ ಡಿ. ಅವಿನಾಶ್ 36 ಎಸೆತಗಳನ್ನೆದುರಿಸಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 41 ರನ್ ಗಳಿಸಿ ಶರತ್ ಅವರಿಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದರು. ನಿನ್ನೆ 84 ರನ್ ಗಳಿಸಿ ಆತ್ಮವಿಶ್ವಾಸ ಮೂಡಿಸಿದ್ದ ರೋಹನ್ ಕದಮ್ ಇಂದು 1 ರನ್ ಗಳಿಸಿ ಪೆವಿಲಿಯನ್ ಸೇರಿದ್ದು ಶಿವಮೊಗ್ಗದ ಮೊತ್ತದ ಮೇಲೆ ಕಡಿವಾಣ ಹಾಕಿದಂತಾಯಿತು.
ಸಂಕ್ಷಿಪ್ತ ಸ್ಕೋರ್:
ಶಿವಮೊಗ್ಗ ಸ್ಟ್ರೈಕರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 133 (ಕೆ ಸಿದ್ಧಾರ್ಥ್ 62* ಡಿ. ಅವಿನಾಸ್ 41, ಅಭಿಮನ್ಯು ಮಿಥುನ್ 20ಕ್ಕೆ 2, ಕೌಶಿಕ್ 25ಕ್ಕೆ 3)
ಹುಬ್ಬಳ್ಳಿ ಟೈಗರ್ಸ್: 17.2 ಓವರ್‌ಗಳಲ್ಲಿ 4 ವಿಕೆಟ್‌ಗೆ 134 (ಮೊಹಮ್ಮದ್ ತಾಹ 78*, ಶರತ್ 41, ಸ್ಟಾಲಿನ್ ಹೂವರ್ 13ಕ್ಕೆ 1)