ಕೋವಿಡ್ ಸಾವಿನ ಪರಿಹಾರದ ಅರ್ಜಿ ನಿರಾಕರಿಸುವಂತಿಲ್ಲ: ಸುಪ್ರೀಂ
1 min readನವದೆಹಲಿ,ಜ.20-ಕೋವಿಡ್ ಸಾವಿನ ಪರಿಹಾರ ಅರ್ಜಿಯನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಲ್ಲಾ ಅರ್ಹ ಕುಟುಂಬಗಳಿಗೆ ಕೋವಿಡ್ ಸಾವಿನ ಪರಿಹಾರ ದೊರೆಯಬೇಕೆಂಬುದು ಕೋರ್ಟ್ ನ ಆಶಯ. ಹೀಗಾಗಿ ತಾಂತ್ರಿಕ ಕಾರಣವೊಡ್ಡಿ ಅರ್ಜಿಗಳನ್ನು ನಿರಾಕರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಕೆಲವೇ ಕೆಲವು ಕೋವಿಡ್ ಸಾವಿನ ಪರಿಹಾರ ಅರ್ಜಿಗಳು ಸ್ವೀಕೃತವಾಗಿರುವುದನ್ನು ಖಂಡಿಸಿರುವ ಸುಪ್ರೀಂ, ಹಲವು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಜೊತೆಗೆ ಕೇರಳ ಮತ್ತು ಬಿಹಾರ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಕೋವಿಡ್ ಸಾವಿನ ಪರಿಹಾರವನ್ನು ನೀಡಲಾಗಿರುವುದನ್ನು ಕೋರ್ಟ್ ಪ್ರಶ್ನಿಸಿದೆ.
ಬಿಹಾರದಲ್ಲಿ 12,000 ಕೋವಿಡ್ ಅರ್ಜಿಗಳಿಗೆ ಪರಿಹಾರ ಮೊತ್ತ ಸಂದಾಯ ಮಾಡಲಾಗಿದೆ. ಇದನ್ನು ಗಮನಿಸಿರುವ ಕೋರ್ಟ್ ಬಿಹಾರದಲ್ಲಿ ಕೇವಲ 12,000 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎನ್ನುವುದನ್ನು ನಂಬಲು ಸಿದ್ಧವಿಲ್ಲ ಎಂದಿದೆ. ತೆಲಂಗಾಣದಲ್ಲಿ 28,000ಕ್ಕೂ ಹೆಚ್ಚು ಅರ್ಜಿಗಳು ಹಾಕಲಾಗಿದ್ದು, ಆ ಪೈಕಿ 3993 ಮಂದಿಯ ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ.