1-10ನೇ ತರಗತಿ ಮಕ್ಕಳಲ್ಲಿ ಸೋಂಕು ಕಂಡುಬಂದಿಲ್ಲ, ಯಾವುದೇ ಶಾಲೆ ಮುಚ್ಚುವುದಿಲ್ಲ: ಸಚಿವ ಬಿ.ಸಿ. ನಾಗೇಶ್

1 min read

ಬೆಂಗಳೂರು: ರಾಜ್ಯದ ಯಾವುದೇ ಶಾಲೆಗಳಲ್ಲೂ 1 ರಿಂದ 10ನೇ ತರಗತಿಯಲ್ಲಿ ಕೊರೋನಾ ಸೋಂಕು ಕಂಡು ಬಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಿಯು ಕಾಲೇಜಿನಲ್ಲಿ ಮಾತ್ರ ಸೋಂಕು ಕಂಡು ಬಂದಿದೆ. ಶಿಕ್ಷಕರು ಸೇರಿ ಒಟ್ಟು ಈವರೆಗೂ 172 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಇದರಲ್ಲಿ ನೂರು ಮಕ್ಕಳು ಈಗಾಗಲೇ ಗುಣಮುಖರಾಗಿದ್ದಾರೆ. ಕೋವಿಡ್ ಬಂದ ಮಕ್ಕಳು ಆರೋಗ್ಯವಾಗಿದ್ದಾರೆ. ಮತ್ತೆ ಕಾಲೇಜು ಆರಂಭವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಡಿಮೆ ಸೋಂಕು ಇರುವುದರಿಂದ ಯಾವುದೇ ಶಾಲೆ ಮುಚ್ಚುವುದಿಲ್ಲ. ದ್ವಿತೀಯ ಪಿಯು ಮಕ್ಕಳಿಗೆ ಇಂದು ಅರ್ಧ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಕಳೆದ ಎರಡು ವರ್ಷ ಪರೀಕ್ಷೆ ಆಗಿಲ್ಲ. ಹಾಗಾಗಿ ಪಿಯು ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಈ ಹಿಂದೆ ಇದ್ದ ಎಸ್​​ಓಪಿಯೇ ಮುಂದುವರೆಯುತ್ತದೆ. ರೆಸಿಡೆನ್ಸಿ ಶಾಲೆಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಅದನ್ನು ಮಾನಿಟರಿಂಗ್ ಮಾಡಲಾಗ್ತಿದೆ. ಬಿಇಓ ಮತ್ತು ಟಿಹೆಚ್ಓ ಸಮಿತಿ ನೇತೃತ್ವದಲ್ಲಿ ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಇನ್ನು ಹಾಸ್ಟೆಲ್‌ಗಳಲ್ಲಿ ಒಟ್ಟಿಗೆ ಊಟಕ್ಕೆ ಹೋಗಬಾರದು. ದೂರ ದೂರದಲ್ಲಿ ಕುಳಿತು ಊಟ ಮಾಡಬೇಕು.ಆದರೆ ಈ ಬಗ್ಗೆ ಯಾವುದೇ ಮಾರ್ಗಸೂಚಿ ಮಾಡಿಲ್ಲ ಎಂದು ಸಚಿವರು ಹೇಳಿದರು.

ಪೋಷಕರು ಎರಡು ಡೋಸ್ ವ್ಯಾಕ್ಸಿನ್ ಪಡೆಯುವುದು ಕಡ್ಡಾಯ ಮಾಡಿಲ್ಲ. ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಕಾನೂನಿನಲ್ಲಿ ಇಲ್ಲ. ಹಾಗಾಗಿ ಪೋಷಕರು ಎರಡು ಡೋಸ್ ಪಡೆದಿಲ್ಲವೆಂದು ಮಕ್ಕಳಿಗೆ ಯಾವುದೇ ನಿರ್ಬಂಧ ಮಾಡಿಲ್ಲ. ಎಲ್ಲಾ ಪೋಷಕರು ಎರಡು ಡೋಸ್ ಪಡೆಯಿರಿ ಎಂದು ಮನವಿ ಮಾಡಿಕೊಳ್ಳಲಾಗುವುದು ಅಷ್ಟೇ ಎಂದರು.

About Author

Leave a Reply

Your email address will not be published. Required fields are marked *