ಕೋವಿಡ್ ಹಿನ್ನೆಲೆ: ಒಂದು ದಿನಕ್ಕೆ ಸೀಮಿತಗೊಂಡ ‘ಹತ್ತೂರಲ್ಲೇ ಚೆಂದದ ನಮ್ಮ ಸುತ್ತೂರು ಜಾತ್ರೆ’
1 min readಮೈಸೂರು,ಜ.29-ಸುತ್ತೂರು ಜಾತ್ರೆ… ಇದು ಇತಿಹಾಸ ಪ್ರಸಿದ್ಧಿ ಜಾತ್ರೆ. ಹತ್ತೂರಲ್ಲೇ ಚೆಂದ ನಮ್ಮ ಸುತ್ತೂರು ಜಾತ್ರೆ. ಹೀಗಾಗಿ “ಹತ್ತೂರು ಸುತ್ತುವುದಕ್ಕಿಂತ ಸುತ್ತೂರು ಜಾತ್ರೆ ನೋಡುವುದು ಲೇಸು” ಎಂಬ ಮಾತಿದೆ.
ಸುತ್ತೂರು ಜಾತ್ರೆ ಪೂಜೆ, ರಥ, ತಿನ್ನಿಸು ಇದಿಷ್ಟಕ್ಕೇ ಸೀಮಿತವಾಗಿಲ್ಲ. ಬದಲಿಗೆ ಜನಪದೀಯ ಅಂಶಗಳನ್ನು ಉಳಿಸಿಕೊಂಡಿರುವ ಜಾತ್ರೆ. ಪ್ರಜ್ಞಾಪೂರ್ವಕವಾಗಿ ಜಾಗೃತಿ ಉಂಟುಮಾಡುವುದರ ಜೊತೆಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಹೀಗಾಗಿ ಸುತ್ತೂರು ಜಾತ್ರೆ ತಲೆತಲೆಮಾರುಗಳಿಂದ ಜೀವಂತಿಕೆಯನ್ನು ಕಾಯ್ದುಕೊಂಡಿರುವುದರ ಜೊತೆಗೆ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.
ರಥೋತ್ಸವ, ಉತ್ಸವಗಳ ಜೊತೆಗೆ ಬೃಹತ್ ಕೃಷಿ ಮೇಳ, ರಾಸುಗಳ ಪ್ರದರ್ಶನ, ಕೈಮಗ್ಗ, ಕರಕುಶಲ ಉತ್ಪನ್ನಗಳು, ಕೈಗಾರಿಕೋತ್ಪನ್ನಗಳು, ಗ್ರಾಮೀಣ ಉತ್ಪನ್ನಗಳ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಲೆಗಳ ಮೇಳ ಇವೆಲ್ಲವೂ ಸುತ್ತೂರು ಜಾತ್ರೆಯ ವಿಶೇಷ ಆಕರ್ಷಣೆ. ‘ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ’ ಇದು ಜಾತ್ರೆಯ ಇನ್ನೊಂದು ವಿಶೇಷತೆ.
ಇಂತಹ ಸುಪ್ರಸಿದ್ಧ ಸುತ್ತೂರು ಜಾತ್ರೆಗೆ ಇಂದು ಸರಳವಾಗಿ ಚಾಲನೆ ಸಿಕ್ಕಿದೆ. ಬಹಳ ಅದ್ಧೂರಿಯಾಗಿ ವಾರಗಟ್ಟಲೇ ನಡೆಯುತ್ತಿದ್ದ ಸುತ್ತೂರು ಜಾತ್ರೆ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಒಂದು ದಿನಕ್ಕೆ ಧಾರ್ಮಿಕ ವಿಧಿ-ವಿಧಾನಕ್ಕಷ್ಟೇ ಸೀಮಿತವಾಗಿದೆ.
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಒಂದು ದಿನದ ಸರಳ ಜಾತ್ರೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಠದವರು ಮಾತ್ರ ಉಪಸ್ಥಿತರಿದ್ದರು.
ಈ ವೇಳೆ ಸರ್ಕಾರದ ಕೋವಿಡ್ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಲಾಯಿತು. ಎಲ್ಲರೂ ಮಾಸ್ಕ್ ಧರಿಸಿದ್ದರು.