ಮಕ್ಕಳಿಗೆ ಲಸಿಕೆ: ಕೋ-ವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆ ಆಯ್ಕೆ

1 min read

ಮೈಸೂರು: ಕೋ-ವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆ ಆಯ್ಕೆಯಾಗಿದೆ. ನಿತ್ಯವೂ ನೂರಾರು ಹೆರಿಗೆ ಆಗುವ ಅತಿದೊಡ್ಡ ಆಸ್ಪತ್ರೆಗೆ ಹೊಸದೊಂದು ಜವಾಬ್ದಾರಿಯನ್ನು ವಹಿಸಲಾಗಿದೆ. ಮಕ್ಕಳಿಗೆ ವ್ಯಾಕ್ಸಿನ್ ಟ್ರಯಲ್ ಮಾಡಲು ವೈದ್ಯಾಧಿಕಾರಿಗಳು ಕಾತರದಿಂದಿದ್ದಾರೆ.

ಮೈಸೂರಿನ ಚೆಲುವಾಂಬ ಮಕ್ಕಳ ಆಸ್ಪತ್ರೆ ಮೈಸೂರು ಮಹಾರಾಜರ ಕೊಡುಗೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಆಸ್ಪತ್ರೆಗೆ ಹೊಸದೊಂದು ಗರಿ ಮೂಡಿದೆ. ದೇಶಾದ್ಯಂತ 5 ಆಸ್ಪತ್ರೆಗಳನ್ನು ಕೋ ವ್ಯಾಕ್ಸಿನ್ ಮಕ್ಕಳ ಮೇಲಿನ ಪ್ರಯೋಗಕ್ಕಾಗಿ ಆಯ್ಕೆ ಮಾಡಲಾಗಿದೆ. ಕ್ಲಿನಿಕಲ್ ಟ್ರಯಲ್ ಗೆ ಆಯ್ಕೆಯಾಗಿರುವ ಕರ್ನಾಟಕದ ಏಕೈಕ ಆಸ್ಪತ್ರೆ ಚೆಲುವಾಂಬ ಅನ್ನೋದು ಹೆಚ್ಚುಗಾರಿಕೆ.

ದೇಶಾದ್ಯಂತ ಈಗಾಗಲೇ 45 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಮೊದಲ ಹಂತದ ಲಸಿಕಾ ಅಭಿಯಾನ ಶುರು ಮಾಡಲಾಗಿತ್ತು. 18 ರಿಂದ 45 ವರ್ಷದೊಳಗಿನವರಿಗೆ ಎರಡನೆ ಹಂತದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ಇದೆಲ್ಲದರ ನಡುವೆ ಕರೋನಾ ಮೂರನೇ ಅಲೆ ಮಕ್ಕಳಿಗೆ ಎಫೆಕ್ಟ್ ಆಗುತ್ತೆ ಅಂತ ವೈರಲಾಸಿಸ್ಟ್ ಗಳು ಅಂದಾಜಿಸಿದ್ದಾರೆ. ಹೀಗಾಗಿ ಮಕ್ಕಳಿಗೂ ವ್ಯಾಕ್ಸಿನ್ ನೀಡುವ ಮೂಲಕ ರೋಗ ನಿಯಂತ್ರಣ ಮಾಡಬೇಕು ಅನ್ನೋದು ಭಾರತ ಸರ್ಕಾರದ ಉದ್ದೇಶ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಿತ್ಯವೂ ನೂರಾರು ಹೆರಿಗೆಗಳು ಆಗುತ್ತಿವೆ. ಕರೋನಾ ಸೋಂಕು ಹೊಂದಿರುವ ಮಕ್ಕಳಿಗೆ ಚಿಕಿತ್ಸೆ ನೀಡಿದ ಅನುಭವವು ಇಲ್ಲಿನ ವೈದ್ಯಾಧಿಕಾರಿಗಳಿಗೆ ಇದೆ. ಈ ಎಲ್ಲಾ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಚೆಲುವಾಂಬ ಆಸ್ಪತ್ರೆ ಯನ್ನು ಆಯ್ಕೆ ಮಾಡಲಾಗಿದೆ. ಇಲ್ಲಿನ ಮಕ್ಕಳ ತಜ್ಞರಾದ ಡಾ. ಪ್ರದೀಪ್ ಮತ್ತು ಡಾ. ಪ್ರಶಾಂತ್ ಅವರನ್ನು ವ್ಯಾಕ್ಸಿನೇಷನ್ ಕ್ಲಿನಿಕಲ್ ಟ್ರಯಲ್ ಗೆ ನಿಯೋಜನೆ ಮಾಡಲಾಗಿದೆ.

ಇನ್ನು ಮಕ್ಕಳನ್ನು 3 ವಯೋಮಾನದವರ ವಿಂಗಡಿಸಿ ಲಸಿಕೆ ನೀಡಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಅದರನ್ವಯ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಟ್ಟು 90 ಮಕ್ಕಳಿಗೆ ಕೋ ವ್ಯಾಕ್ಸಿನ್ ಪ್ರಯೋಗಿಸಲಾಗುವುದು. ಪ್ರತಿ ಬಾರಿಯೂ ಅವರ ರಕ್ತದ ಮಾದರಿಯನ್ನು ಪರಿಶೀಲನೆ ಮಾಡುವ ಮೂಲಕ ದೇಹದಲ್ಲಿ ಆಂಟಿಬಾಡೀಸ್ ಬದಲಾವಣೆಯನ್ನು ಗಮನಿಸಲಾಗುವುದು ಅಂತ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಐಸಿಎಂಆರ್ ಕ್ಲಿನಿಕಲ್ ಟ್ರಯಲ್ ಗೆ ಆಯ್ಕೆ ಮಾಡಿಕೊಂಡ 5 ಆಸ್ಪತ್ರೆಗಳ ಪೈಕಿ ಚೆಲುವಾಂಬ ಕೂಡ ಒಂದು ಅನ್ನುವುದು ಮೈಸೂರಿಗೆ ಹೆಮ್ಮೆಯ ವಿಚಾರವೇ ಹೌದು.

About Author

Leave a Reply

Your email address will not be published. Required fields are marked *