ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವುದು ಸೂಕ್ತ: ಉಸ್ತುವಾರಿ ಕಾರ್ಯದರ್ಶಿ ಜಯರಾಂ
1 min read
ಮೈಸೂರು: ಜಿಲ್ಲೆಯಲ್ಲಿ ಕೋವಿಡ್-19 ತಡೆಗಟ್ಟುವ ದೃಷ್ಟಿಯಿಂದ ಸೋಂಕಿನ ಅಲಕ್ಷಣ ಕಂಡುಬಂದವರನ್ನು ಸಹ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವುದು ಸೂಕ್ತ ಎಂದು ಮೈಸೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತಿ ಆಡಳಿತಾಧಿಕಾರಿ ಜಯರಾಂ ಅವರು ಹೇಳಿದರು.
ಶುಕ್ರವಾರ ಜಿಲ್ಲಾ ಪಂಚಾಯತಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸೊಂಕಿನ ಲಕ್ಷಣ ಕಂಡುಬಂದ ಮನೆಯಲ್ಲಿ ಹೋಮ್ ಐಸೋಲೇಷನ್ ಆಗಿರುವವರು ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ ಅಕ್ಕಪಕ್ಕದವರಿಗೆ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಅವರನ್ನು ಮನವೊಲಿಸಿ ಸಿಸಿಸಿಗೆ ವರ್ಗಾಯಿಸುವುದು ಸೂಕ್ತ ಎಂದು ಅಧಿಕಾರಿಗಳಿಗೆ ಹೇಳಿದರು.

ಜಿಲ್ಲೆಯಲ್ಲಿ ಆರಂಭಿಸಿರುವ ಕೋವಿಡ್ ಮಿತ್ರ ಪರಿಕಲ್ಪನೆ ಉತ್ತಮವಾಗಿದ್ದು, ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಗಂಭೀರ ಸ್ಥಿತಿ ಎದುರಾಗದಿರಲು ಇದು ಪೂರಕವಾಗಿದೆ ಎಂದು ತಿಳಿಸಿದರು.

ನಗರ ಪ್ರದೇಶಗಳಲ್ಲಿ ಬಹುತೇಕ ಮನೆಗಳಲ್ಲಿ ಮೂಲಭೂತ ಸೌಕರ್ಯವಿಲ್ಲ. ಅಂತಹ ಮನೆಯಲ್ಲಿ ವಾಸಿಸುವ ಸೋಂಕಿತರನ್ನು ಹತ್ತಿರದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಸಭೆಯ ನಂತರ ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್ ಮಿತ್ರ, ವರಕೋಡು ಮೊರಾರ್ಜಿ ದೇಸಾಯಿ ಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್, ಕೀಳನಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಿದ್ದರಾಮನಹುಂಡಿ ಪ್ರಾಥಮಿಕ ಆರೋಗ್ಯ ಮುಂತಾದ ಕಡೆ ಭೇಟಿ ನೀಡಿ ಪರಿಶೀಲಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಜಿಲ್ಲಾ ಪಂಚಾಯತಿಯ ಸಿಇಒ ಎ.ಎಂ.ಯೋಗೀಶ್, ನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್, ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಿ.ಪಿ.ನಂಜರಾಜ, ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರನಾಥ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಷಾದ್ ಶರೀಫ್, ತಹಶೀಲ್ದಾರ್ ರಕ್ಷಿತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ರಮೇಶ್, ಸೇರಿದಂತೆ ಇತರರು ಹಾಜರಿದ್ದರು.